ಮಂಡ್ಯ:ಸಾಹಿತ್ಯದ ಮೂಲಕ ನಮ್ಮತನ ಹೆಚ್ಚಲು ಸಾಧ್ಯ. ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡೋದು ಅತ್ಯವಶ್ಯಕ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡೋದು ಅತ್ಯವಶ್ಯಕ. ಸಾಹಿತ್ಯಕ್ಕೆ ಸಮಯ ಕೊಡೋದು ಕಡಿಮೆ ಆಗುತ್ತಿದೆ ಎಂದ ಅವರು, ಕೇವಲ ಸಂಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಡಿಸಿಎಂ ಅಶ್ವತ್ಥ ನಾರಾಯಣ ಈ ಸಮ್ಮೇಳನ ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತಾಗಲಿ, ಜಿಲ್ಲೆಯಲ್ಲಿ ವ್ಯವಸಾಯವನ್ನೇ ನಂಬಿರುವ ಜನರೇ ಹೆಚ್ಚಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆ ತರಬೇಕಿದೆ ಎಂದು ಹೇಳಿದರು.
ಓದಿ:ಪಂಚಮಸಾಲಿ ಮೀಸಲಾತಿಗೆ ನನ್ನ ಬೆಂಬಲವಿದೆ : ಡಿಸಿಎಂ ಸವದಿ ಸ್ಪಷ್ಟೀಕರಣ
ಇಸ್ರೇಲ್ ಮಾದರಿ ಕೃಷಿ ಅಳವಡಿಕೆಗೆ ಒತ್ತು ನೀಡಿ ಡಿಜಿಟಲ್ ಫಾರ್ಮಿಂಗ್ ಅಳವಡಿಕೆಗೆ ರೈತರಿಗೆ ಕರೆ ನೀಡಿದ ಅವರು, ಶಿಕ್ಷಣ ಕ್ಷೇತ್ರದಿಂದ ಸಮಾಜ ಸುಧಾರಣೆಯಾಗುತ್ತದೆ. ಸರ್ಕಾರದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ಒಂದು ಕೋಟಿ ಉದ್ಯೋಗ ನಿರ್ಮಾಣದ ಗುರಿ ಹೊಂದಿದ್ದೇವೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಸದ್ಯದಲ್ಲೇ ಮೈಶುಗರ್ ಆರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.