ಮಂಡ್ಯ:ಕೆಆರ್‌ಎಸ್ ಬೃಂದಾವನದಲ್ಲಿ ಕಳೆದ ರಾತ್ರಿಯೂ ಚಿರತೆ ಹಾಗೂ ಮುಳ್ಳುಹಂದಿ ಪ್ರತ್ಯಕ್ಷವಾಗಿವೆ. ಬೋನ್ಗೆ ಬೀಳದೆ ಚಿರತೆ ಪದೇ ಪದೇ ಕಾಣಿಸಿಕೊಂಡು ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ. ಉತ್ತರ ಬೃಂದಾವನ ಬಳಿ ಬೋನ್ ಇಟ್ಟು ನಾಯಿ ಕಟ್ಟಿದರೂ ಹತ್ತಿರ ಹೋಗದೆ ಮುಳ್ಳುಹಂದಿ ಬೇಟೆಗೆ ವಿಫಲ ಯತ್ನ ನಡೆಸಿದೆ. ಮುಳ್ಳುಹಂದಿ ಜತೆ ಸೆಣಸಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಕ್ಕರೆ ನಾಡಿನ ಜೀವನಾಡಿ ಕೆಆರ್‌ಎಸ್‌ನ ಬೃಂದಾವನದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಅಲ್ಲಿನ ಸಿಬ್ಬಂದಿಯ ನಿದ್ದೆಗೆಡೆಸಿದೆ. ಇದೀಗ ಅಧಿಕಾರಿಗಳುಫುಲ್ ಆಕ್ಟಿವ್ ಆಗಿದ್ದು, ಅರಣ್ಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನ ಗಾರ್ಡನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನಣೆ ಪಡೆದಿರುವ ಪ್ರವಾಸಿ ಸ್ಥಳ. ಇದೀಗ ಈ ವಿಶ್ವ ವಿಖ್ಯಾತಿ ಪಡೆದಿರುವ ಸ್ಥಳದಲ್ಲಿ ಕಳೆದ 20 ದಿನಗಳಿಂದ ಚಿರತೆ ಕಣ್ಣಾಮುಚ್ಚಾಲೆ ಆಡುತ್ತಿದೆ.
ಪ್ರವಾಸಿಗರಿಗೆ ನಿರ್ಬಂಧ:ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರಿಸಿದೆ. ಕಳೆದ 20 ದಿನಗಳಿಂದ ಐದಾರು ಬಾರಿ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಸೆರೆಯಾಗಿದೆ. ಆದರೆ ಈ ಭಾಗದಲ್ಲಿ ಎರಡು ಚಿರತೆಗಳಿದ್ದು, ಒಂದು ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದರೆ, ಇನ್ನೊಂದು ಚಿರತೆ ಅಪರೂಪದ ಪ್ರಾಣಿಯಾದ ನೀರು ನಾಯಿಗಳನ್ನು ಬೇಟೆಯಾಡುತ್ತಿದೆ ಎಂದು ಹೇಳಲಾಗ್ತಿದೆ.
ಮುಳ್ಳುಹಂದಿ ಬೇಟೆಯಾಡಲು ಯತ್ನಿಸುತ್ತಿರುವ ಚಿರತೆ 3 ಬೋನ್‌ಗಳಿರಿಸಿ ಕಾರ್ಯಾಚರಣೆ:ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ಕಡೆ ಕಾವೇರಿ ನೀರಾವರಿ ನಿಗಮ ಇಲ್ಲಿ ಬೆಳೆದಿರುವ ಬೇಲಿಗಳನ್ನು ಸ್ವಚ್ಛ ಮಾಡಿ ಕಾರ್ಯಾಚರಣೆಗೆ ಅನುಕೂಲ ಮಾಡುತ್ತಿದೆ. ಮತ್ತೊಂದು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕಾಣಿಸಿಕೊಂಡಿರುವ ಸ್ಥಳದಲ್ಲಿ ಟ್ರ‍್ಯಾಪ್ ಕ್ಯಾಮರಾಗಳನ್ನು ಹಾಕಿದೆ. ಈ ಟ್ರ‍್ಯಾಪ್ ಕ್ಯಾಮರಾ ಚಿರತೆಯ ಚಲನವಲನಗಳ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದರಿಂದ ಅರಣ್ಯ ಇಲಾಖೆಗೂ ಅನುಕೂಲವಾಗಲಿದೆ. ಒಟ್ಟು ಮೂರು ಬೋನ್‌ಗಳಿರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಿಗೆ ನಿರ್ಬಂಧ