ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಜನರು ತಮ್ಮ ಜಮೀನಿನ ಬಳಿ ಹೋಗಲು ಹೆದುರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಕಬ್ಬು ಕಟಾವಿನಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೊಮ್ಮಾನಾಯಕನಹಳ್ಳಿ ಗ್ರಾಮದ ಜಯರಾಮ್ ಚಿರತೆ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದು, ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಕೂಲಿ ಕಾರ್ಮಿಕರಾಗಿದ್ದಾರೆ. ಕಬ್ಬಿನ ಕಟಾವು ಮಾಡುವ ವೇಳೆ ಕಾರ್ಮಿಕ ಜಯರಾಮ್ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಇತರೆ ಕೂಲಿ ಕಾರ್ಮಿಕರ ಚೀರಾಟ ಕೂಗಾಟದಿಂದ ಗಾಬರಿಗೊಂಡ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಕಾರ್ಮಿಕನ ಮುಖ, ಕಿವಿ, ಕತ್ತಿನ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಕಾರ್ಮಿಕನನ್ನು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.
ಮಲ್ಲನಕುಪ್ಪೆ ಗೇಟ್ ಬಳಿ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ:ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ನುಗ್ಗಿ ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳಿಗೆ ಹಾನಿ ಉಂಟಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆ ಗೇಟ್ ಬಳಿ ನಡೆದಿದೆ. ರಸ್ತೆ ಬದಿಗೆ ನುಗ್ಗಿದ ಕಾರಿನಿಂದ ಅಂಗಡಿಗಳ ಮುಂಭಾಗದ ಶೆಡ್ಗಳು ಮುರಿದು ಬಿದ್ದಿವೆ. ಕಾರು ರಸ್ತೆ ಬದಿಗೆ ನುಗ್ಗುತ್ತಿದ್ದಂತೆ ಅಂಗಡಿ ಬಳಿ ಕುಳಿತಿದ್ದ ಜನರು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.