ಮಂಡ್ಯ :ರಾಜ್ಯದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಘಟನಾ ಸ್ಥಳಕ್ಕೆ ಖುದ್ದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಆರೋಗ್ಯ ಸಚಿವರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕದಲೂರು ಉದಯ್, ಡಿಎಚ್‌ಒ ಡಾ.ಕೆ.ಮೋಹನ್ ಸಾಥ್ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಭ್ರೂಣ ಲಿಂಗ ಪತ್ತೆ, ಹತ್ಯೆ ಅನ್ನೋದು ಅತ್ಯಂತ ಕ್ರೂರವಾದುದು. ಇಂತಹ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣ ಸಂಬಂಧ ಇಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬಂಧಿತ ವ್ಯಕ್ತಿ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾ ಇಟ್ಟಿದ್ದರು. ಎರಡು ತಿಂಗಳ ಹಿಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಲೆಮನೆಗೆ ಭೇಟಿ ನೀಡಿದ್ದರು. ಆ ವೇಳೆ ಇಲ್ಲಿ ಯಾವುದೇ ಅಂಶಗಳು ಪತ್ತೆ ಆಗಿರಲಿಲ್ಲ.
ಇದರ ಬಗ್ಗೆ ಸಾರ್ವಜನಿಕರಿಗೂ ತಿಳಿವಳಿಕೆ ಬೇಕು. ಪ್ರಕರಣದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಭಾಗಿಯಾಗಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪ್ರಕರಣದ ಬೆನ್ನು ಬಿದ್ದು ಪತ್ತೆ ಮಾಡಬೇಕಿತ್ತು. ಇದಕ್ಕೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಕೆಲಸ ಮಾಡಿಲ್ಲ. ಇದನ್ನು ನೋಡಿದರೇ ಅಧಿಕಾರಿಗಳ ಬೇಜವಾಬ್ದಾರಿ ಇದೆ ಅನ್ನೋದು ಕಾಣುತ್ತದೆ. ಈ ಬಗ್ಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮವಹಿಸಲು ಹೊಸ ಕಾರ್ಯಕ್ರಮ ರೂಪಿಸುತ್ತೇವೆ. ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲು ನಾನು ಒತ್ತಾಯ ಮಾಡುತ್ತೇವೆ ಎಂದರು.