ಮಂಡ್ಯ:ಮದ್ದೂರಿನ ನವಿಲೆ ಗ್ರಾಮದ ವಕೀಲ ರವೀಂದ್ರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.2 ರಂದು ವಕೀಲ ರವೀಂದ್ರ ಅವರನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗಾಗಿ ಮಳವಳ್ಳಿ ಡಿವೈಎಸ್‌ಪಿ ಪೃಥ್ವಿ ನೇತೃತ್ವದಲ್ಲಿ 3 ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.
ಓದಿ: ಬಿಎಸ್‌ಪಿ ಮುಖಂಡ ಎನ್ ಕೆ ರವೀಂದ್ರ ಅನುಮಾನಾಸ್ಪದ ಸಾವು
ಓರ್ವ ಬಾಲಕ ಸೇರಿ ನವಿಲೆ ಗ್ರಾಮದ ನಿವಾಸಿಗಳಾದ ಎನ್.ಟಿ.ರಂಗಸ್ವಾಮಿ (33), ಸಂತೋಷ (32), ರಂಗಸ್ವಾಮಿ (35), ಹರಕನಹಳ್ಳಿ ಗ್ರಾಮದ ಅಭಿರಾಜ, ನಾಗರಾಜು (20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ರವೀಂದ್ರ ವಿರುದ್ದ ರಂಗಸ್ವಾಮಿಯವರ ಅತ್ತಿಗೆ ಆತ್ಮಹತ್ಯೆಗೆ ಸಂಬಂಧಿಸಿದಂತೆ 2017 ಪ್ರಕರಣ ದಾಖಲಾಗಿತ್ತು. ಜಮೀನಿನ ವಿಚಾರವಾಗಿ ವ್ಯಾಜ್ಯ ನಡೆಯುತ್ತಿತ್ತು. ಸಿವಿಲ್ ವ್ಯಾಜ್ಯ ಹಾಗೂ ಹಳೆ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಆರೋಪಿಗಳು ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಳವಡಿಸಿ ತನಿಖೆ ನಡೆಸಲಾಗುತ್ತಿದೆ. ಜಮೀನಿನ ಬಳಿ ಸ್ಕೆಚ್ ಹಾಕಿ ಹತ್ಯೆ ಮಾಡಿದ್ದಾರೆ. ಈಗ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಳಪಡಿಸಲಾಗಿದೆ ಎಂದು ಎಸ್.ಪಿ.ಪರುಶುರಾಮ ತಿಳಿಸಿದರು.