ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ನೀರು ಮಿಶ್ರಿತ ಹಾಲು ಪೂರೈಸಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಹಗರಣ ಮೇ 27ರಂದು ಬೆಳಕಿಗೆ ಬಂದಿತ್ತು. ನಾಗಮಂಗಲ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಆರಂಭವಾಗಿದ್ದ ಪ್ರಕರಣದ ತನಿಖೆ ಅಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಿಬಿಐ ತನಿಖೆಗೆ ವಹಿಸುವಂತೆ ರೈತಸಂಘ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಅಂತಿಮವಾಗಿ ರಾಜ್ಯ ಸರ್ಕಾರ ಸಿಐಡಿಗೆ ತನಿಖೆಯ ಜವಾಬ್ದಾರಿ ನೀಡಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ.
ಮನ್ಮುಲ್ಗೆ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಈ ನಡುವೆ ಮನ್ಮುಲ್ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು ಎಂದು ವಕೀಲ ಟಿ.ಎನ್ ಸತ್ಯಾನಂದ ಎಂಬುವರು ದಾಖಲೆ ಸಹಿತ ಆರೋಪಿಸಿದ್ದಾರೆ.
ಎಫ್ಐಆರ್ ದಾಖಲಿಸುವ ಹಂತದಲ್ಲೇ ಪ್ರಕರಣವನ್ನು ಹಳ್ಳ ಹಿಡಿಸುವ ವ್ಯವಸ್ಥಿತ ಷಡ್ಯಂತ್ರ್ಯ ನಡೆದಿತ್ತು ಎನ್ನಲಾಗಿದೆ. ಮೇ 27ರಂದೇ ಪ್ರಕರಣ ಬೆಳಕಿಗೆ ಬಂದರೂ ಮೇ 28ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಜಾಮೀನು ಸಿಗುವಂತಹ ಸೆಕ್ಷನ್ ದಾಖಲಿಸಿದ್ದಾರೆ. ಈ ದೂರಿನಲ್ಲಿ ವಂಚನೆ, ಕಲಬೆರಕೆ, ಕಳ್ಳತನ ಸೇರಿ ಹಲವು ಅಂಶಗಳು ಉಲ್ಲೇಖವಾಗಿದ್ರೂ ಕೇವಲ ವಂಚನೆ ಹಾಗೂ ಕಲಬೆರಕೆಗೆ ಸಂಬಂಧಿಸಿದ ಪ್ರಕರಣವನ್ನು ಮಾತ್ರ ದಾಖಲಿಸಿದ್ದಲ್ಲದೇ, ಟ್ಯಾಂಕರ್ ಗುತ್ತಿಗೆದಾರ ರಂಜನ್‌ಕುಮಾರ್ ಕೈಬಿಟ್ಟು ನಿರೀಕ್ಷಣಾ ಜಾಮೀನು ಸಿಗುವಂತೆ ಸಂಚು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಟ್ಯಾಂಕರ್ನಲ್ಲಿ ಕಂಪಾರ್ಟ್ಮೆಂಟ್ ನಿರ್ಮಿಸಿಕೊಂಡು ನೀರು ಮಿಶ್ರಣ ಮಾಡಿ ವಂಚನೆ ಮಾಡ್ತಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಹೀಗೆ ಹಲವು ಲೋಪಗಳನ್ನು ಮಾಡುವ ಮೂಲಕ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ ದೂರಿದ್ದಾರೆ. ಇನ್ನು ಮನ್ಮುಲ್ ಆಡಳಿತ ಮಂಡಳಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದ್ರೆ ಎಫ್ಐಆರ್ ಲೋಪದ ಬಗ್ಗೆ ಚಕಾರವೆತ್ತಿಲ್ಲ ಎಂದಿದ್ದಾರೆ.
ಪ್ರಭಾವಿ ರಾಜಕೀಯ ನಾಯಕರ ಒತ್ತಡಕ್ಕೆ ಸಿಐಡಿ ಅಧಿಕಾರಿಗಳು ಮಣಿಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಇಲ್ಲವಾದರೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.