ಮಂಡ್ಯ: ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ವಸತಿ ಶಾಲೆಗಳನ್ನು ಆರಂಭಿಸಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿಗೆ ಸುಸಜ್ಜಿತ ಮನೆ ಬಾಡಿಗೆಗೂ ಅವಕಾಶ ನೀಡಿದೆ. ಆದರೆ ಅಧಿಕಾರಿಗಳ ಯಡವಟ್ಟಿಗೆ ಬಡವರ ಮಕ್ಕಳು ಅರಣ್ಯದ ಮಧ್ಯೆ ವಾಸಿಸುವ ಪರಿಸ್ಥಿತಿ ತಾಲೂಕಿನ ಹುಲಿಕೆರೆ ಕೊಪ್ಪಲು ಬಳಿ ಕಂಡುಬಂದಿದೆ.
ಭಯದಲ್ಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಂಡ್ಯ ತಾಲೂಲ್ಲೂಕಿನ ಹುಲಿಕೆರೆ ಕೊಪ್ಪಲು ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪರಿಸ್ಥಿತಿ ಹೇಳತೀರದಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ಶಾಲೆಯಲ್ಲಿ 150 ಮಕ್ಕಳಿದ್ದಾರೆ. ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಮದುವೆ ಮಂಟಪವನ್ನು ಬಾಡಿಗೆಗೆ ಪಡೆದು ವಸತಿ ಶಾಲೆ ಆರಂಭ ಮಾಡಲಾಗಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ವಸತಿ ಶಾಲೆಯ ಮಕ್ಕಳು ರಾತ್ರಿ ಸಮಯ ಭಯದಿಂದಲೇ ವ್ಯಾಸಂಗ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲ ಸೌಲಭ್ಯವೇ ಇಲ್ಲದ ಈ ಕಟ್ಟಡದಲ್ಲೇ ಮಕ್ಕಳು ವಾಸವಿದ್ದಾರೆ. ಈ ಶಾಲೆಗೆ ಹುಲಿಕೆರೆ ಅರಣ್ಯ ಪ್ರದೇಶ ಹೊಂದಿಕೊಂಡಿದ್ದು, ರಾತ್ರಿ ವೇಳೆ ಚಿರತೆಗಳ ಹಾವಳಿ ಹೆಚ್ಚಿದೆ. ಜೊತೆಗೆ ನಿರ್ಜನ ಪ್ರದೇಶವಾಗಿದ್ದು, ಭಯದಿಂದಲೇ ಪಾಠ ಕೇಳುತ್ತಿದ್ದಾರೆ. ಗಂಡು ಮಕ್ಕಳಿಗಾಗಿ ಹೊರಗೆ ಸ್ನಾನದ ಮನೆ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ನೀರಿನ ಸಮಸ್ಯೆ ಜೊತೆಗೆ, ಕಾಡು ಪ್ರಾಣಿಗಳ ಭಯ ಕಾಡುತ್ತಿದೆ. ಇನ್ನು ಹೆಣ್ಣುಮಕ್ಕಳಿಗೆ ಒಳಗೆ ಶೌಚಾಲಯ ಇದ್ದರೂ ವಾರಕ್ಕೆ ಎರಡು ದಿನ ಮಾತ್ರ ನೀರು ಕೊಡಲಾಗುತ್ತಿದೆಯಂತೆ. ಸ್ನಾನ ಎರಡು ದಿನಗಳಿಗೊಮ್ಮೆ ಮಾಡಬೇಕು. ದುರದೃಷ್ಟವೆಂದರೆ ಇಲ್ಲಿರುವುದು ಮೂರೇ ರೂಂ. ಇಲ್ಲೇ ಪಾಠ ಕೇಳಬೇಕು, ಮಲಗಬೇಕು, ಪಾಠದ ಅಭ್ಯಾಸ ಮಾಡಬೇಕು. ಜೊತೆಗೆ ಶಿಕ್ಷಕರೂ ಸಹ ಇಲ್ಲೇ ಮಲಗಬೇಕಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಇನ್ನು ಉತ್ತಮ ಕಟ್ಟಡ ನಿರ್ಮಾಣ ಮಾಡಿಕೊಡಬೇಕಾದ ಅಧಿಕಾರಿಗಳು ಇಂತಹ ಕಟ್ಟಡಕ್ಕೆ ಮಕ್ಕಳನ್ನು ಸಾಗಹಾಕಿ ಕೈ ತೊಳೆದುಕೊಂಡಿದ್ದಾರೆ. ಮಕ್ಕಳು ಭಯದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇಲ್ಲಿದೆ.