ಮಂಡ್ಯ:ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸ್ಪೋಟ ಸಂಭವಿಸಿದ್ದು, ಕಾರ್ಮಿಕನೊಬ್ಬ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಕಳೆದ ರಾತ್ರಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಗಾಗಿ ಕುಳಿ ತೋಡುತ್ತಿದ್ದಾಗ ಸ್ಫೋಟಕ ಸಿಡಿದಿದೆ ಎನ್ನಲಾಗಿದೆ. ಈ ಸ್ಪೋಟದ ಭೀಕರತೆಗೆ ಸ್ಥಳದಲ್ಲಿದ್ದ ಕೊಳ್ಳೇಗಾಲ ಮೂಲದ ಕಾರ್ಮಿಕ ರಾಜು ಸಾವಿಗೀಡಾಗಿದ್ದಾರೆ. ಇದೇ ವೇಳೆ ತಂಗವೇಲು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಮುಚ್ಚಿಹಾಕಲು ಕ್ವಾರಿ ಮಾಲೀಕರ ಯತ್ನ ಆರೋಪ
ಕಲ್ಲು ಕ್ವಾರಿ ಮಾಲೀಕನಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದ್ದು, ಬಡ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಹೇಳಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಜೊತೆಗೆ ಪ್ರಕರಣವನ್ನು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಗೌಪ್ಯವಾಗಿ ಶವ ಸಂಸ್ಕಾರ ಮಾಡಲು ಮಾಲೀಕ ಮುಂದಾಗಿದ್ದಾರೆ ಎನ್ನಲಾಗಿದೆ.