ಮಂಡ್ಯ: ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಇರೋವರೆಗೂ ಶಾಲೆಗಳು ಉದ್ಧಾರವಾಗಲ್ಲ. ಸುರೇಶ್ ಕುಮಾರ್ ಅವರ ಎಡಬಿಡಂಗಿ ನಿರ್ಧಾರಗಳೇ ಇಂದಿನ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗೆ ಕಾರಣ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನನ್ನ ಸ್ನೇಹಿತ. ಆದರೆ, ಅವರಿಗೆ ಈ ಖಾತೆ ಸರಿ ಹೊಂದುವುದಿಲ್ಲ. ಸರ್ಕಾರ ಖಾಸಗಿ ಶಾಲೆಗಳಿಗೆ ಯಾವುದೇ ಸವಲತ್ತು ನೀಡದೇ ಗದಾ ಪ್ರಹಾರ ಮಾಡುವುದು ಸರಿಯಲ್ಲ. ಟ್ಯಾಕ್ಸ್ ವಿನಾಯಿತಿ, ಇನ್ಸುರೆನ್ಸ್ ವಿನಾಯಿತಿ ನೀಡಿ ನಂತರ ನಮ್ಮ ಮೇಲೆ ಸರ್ಕಾರ ಅಧಿಕಾರ ಪ್ರಯೋಗಿಸಲಿ ಎಂದು ಕಿಡಿ ಕಾರಿದರು.
ಕೆಲವು ಸಚಿವರ ಸರ್ಕಾರದಂತೆ ಕಾಣುತ್ತಿದೆ:
ಇನ್ನು ಶಾಲೆ ಪುನಾರಂಭ ವಿಚಾರವಾಗಿ ಮಾತನಾಡಿ, ಶಾಲೆಗಳ ವ್ಯವಸ್ಥೆ ಎಂದರೆ ಸೌಹಾರ್ದಯುತ ಆಗಿರಬೇಕು. ಆದರೆ, ಸರ್ಕಾರ ಆ ನಿಟ್ಟಿನಲ್ಲಿ ನಡೆಸಿಕೊಳ್ಳುತ್ತಿಲ್ಲ. ಸರ್ಕಾರ ಕೊರೊನಾ ಹಾಗೂ ಶೈಕ್ಷಣಿಕ ತೀರ್ಮಾನಗಳೆರಡರಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರೊದ್ರಿಂದ ಈ ರೀತಿ ಆಗ್ತಿದೆ ಅನಿಸುತ್ತದೆ. ಕೆಲವು ಸಚಿವರ ಸರ್ಕಾರದಂತೆ ಕಾಣುತ್ತಿದೆ. ಇನ್ನು ಕೆಲವು ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.