ಮಂಡ್ಯ: ಬಿಜೆಪಿ ಸರ್ಕಾರ ಸುಸೈಡ್ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ತೆಲಂಗಾಣದ ಕಾಂಗ್ರೆಸ್ ಪ್ರದೇಶ್ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕುಸುಮ ಕುಮಾರ್ ಚೌಧರಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಕ್ಸಸ್ ಕಂಡಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಗ್ರ್ಯಾಂಡ್ ಸಕ್ಸಸ್ ಮಾಡಿದ್ದಾರೆ. ಡಬಲ್ ಇಂಜಿನ್, ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಶೇ 40ರಷ್ಟು ಕಮಿಷನ್ ಸರ್ಕಾರವಾಗಿದೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾಹಿತಿ ಬಿಚ್ಚಿಡುತ್ತಿದೆ. ಬಿಜೆಪಿ ಸರ್ಕಾರ ಲೂಟಿಯಲ್ಲಿ ಬಿಸಿಯಾಗಿದೆ ಎಂದರು.
ಕೋವಿಡ್ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಕೋವಿಡ್ ನಿರ್ವಹಣೆ ಸರಿಯಾಗಿ ಬಿಜೆಪಿ ಸರ್ಕಾರ ಮಾಡಿಲ್ಲ. ಕೊರೊನಾ ಅಲೆ ಎದ್ದಾಗ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಪ್ರಧಾನಿ ಬ್ಯುಸಿ ಇದ್ರು. ಗುತ್ತಿಗೆದಾರರು, ಬಡವರು, ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಸುಸೈಡ್ ಸರ್ಕಾರ. ಜನವರಿ 27ಕ್ಕೆ ಪ್ರಜಾಧ್ವನಿ ಸಮಾವೇಶ ಮಂಡ್ಯದಲ್ಲಿ ನಡೆಯಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶದಲ್ಲಿ ಸುರ್ಜೆವಾಲ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಯುಜಿಸಿ ಕಚೇರಿ ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ:ಇನ್ನೊಂದೆಡೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. ಪಿಎಂ- ಹೆಚ್ಎಂ ಕರ್ನಾಟಕಕ್ಕೆ ಪ್ರತಿ ಸಾರಿ ಬಂದಾಗಲೂ ಕನ್ನಡಿಗರಿಗೆ ಆಘಾತ ಮಾಡಿಯೇ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಕಚೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.