ಚಿಕ್ಕಮಗಳೂರು: ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಯ ಜೊತೆಗೆ ರಾಜಕೀಯ ತಂತ್ರಗಾರಿಕೆಯನ್ನೂ ಆರಂಭಿಸಿದೆ. ಈ ಮಧ್ಯೆ, "ಜೆಡಿಎಸ್ಗೆ ನಾಲ್ಕು ಅಥವಾ ಐದು ಕ್ಷೇತ್ರಗಳು ಫಿಕ್ಸ್. ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಆದರೆ ಮಂಡ್ಯ ಮತ್ತು ಹಳೆ ಮೈಸೂರು ಭಾಗದ ನಾಯಕರು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಿ ಒತ್ತಡ ಹಾಕುತ್ತಿದ್ದಾರೆ" ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಬುಧವಾರ, ಕುಮಾರಸ್ವಾಮಿ ಮತ್ತು ಹಳೆ ಮೈಸೂರು ಭಾಗದ ನಾಯಕರ ಸಭೆಯ ಬಗ್ಗೆ ಹೆಚ್ಡಿಕೆ ಆಪ್ತರಾದ ಭೋಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ನಮಗೆ ಮಂಡ್ಯದಲ್ಲಿ ಜನಬೆಂಬಲವಿದೆ. ಸಂಕ್ರಾಂತಿ ನಂತರ ಹಿಸಿ ಸುದ್ದಿ ನೀಡುತ್ತಾರೆ" ಎಂದು ಹೇಳಿದರು.
"ಮಂಡ್ಯ-ಮೈಸೂರು ಕ್ಷೇತ್ರದ ಟಿಕೆಟ್ ಸಂಬಂಧ ನಾಯಕರ ಜೊತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟು ಕೊಡಬೇಕೋ ಅಥವಾ ಜೆಡಿಎಸ್ ತೆಕ್ಕೆಗೆ ಬಿಟ್ಟುಕೊಡುವಂತೆ ಬಿಜೆಪಿಗೆ ದಂಬಾಲು ಬೀಳಬೇಕೋ ಎನ್ನುವ ಕುರಿತು ಚರ್ಚೆ ಮಾಡಲು ಸಭೆ ಮಾಡಿದ್ದಾರೆ" ಎಂದು ಮಾಹಿತಿ ನೀಡಿದರು.