ಮಂಡ್ಯ: ಕಾವೇರಿ ನದಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯ (ಕೆಆರ್‌ಎಸ್) ನೀರಿನ ಮಟ್ಟ 100 ಅಡಿ ತಲುಪಿದೆ. ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕಾವೇರಿ ಜಲಾಶಯಕ್ಕೆ ಜೀವಕಳೆ ತಂದಿದೆ. ಕಳೆದ 24 ಗಂಟೆಯಲ್ಲಿ 4 ಟಿಎಂಸಿ ನೀರು ಹರಿದು ಬಂದಿದೆ.
ಇಂದು ಬೆಳಗ್ಗೆ 51,508 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಮಂಗಳವಾರ ಸಂಜೆ 100 ಅಡಿಗೆ ನೀರು ತಲುಪಿದೆ. ಇಂದು ಬೆಳಗ್ಗೆ ಜಲಾಶಯದಲ್ಲಿ 104.80 ಅಡಿ ನೀರಿದ್ದು, ಒಂದೇ ದಿನದಲ್ಲಿ 5 ಅಡಿ ಜಲಧಾರೆ ಅಣೆಕಟ್ಟೆಯ ಒಡಲು ಸೇರಿದೆ.
ಇನ್ನೊಂದೆಡೆ, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿನಕ್ಕೂ ಹೆಚ್ಚಳವಾಗುತ್ತಿರುವುದು ರೈತರ ಬದುಕಿನಲ್ಲಿ ಹರುಷ ಮೂಡಿಸಿದೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗಿದೆ. ಹಾಗಾಗಿ, ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಕೂಡ ಹೆಚ್ಚಾಗಿದೆ. ಹೇಮಾವತಿಯಿಂದಲೂ ನೀರನ್ನು ಹೊರಬಿಟ್ಟರೆ ಕೆಆರ್‌ಎಸ್ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರಲಿದೆ. ಮುಂಗಾರು ವೈಫಲ್ಯದಿಂದ ನೀರಿಲ್ಲದೆ ಸೊರಗಿದ್ದ ಜಲಾಶಯ ಇದೀಗ ಮೈದುಂಬಿಕೊಳ್ಳುತ್ತಿದೆ.
ಇದನ್ನೂ ಓದಿ :Kabini Reservoir : ಕಬಿನಿ ಜಲಾಶಯ ಭರ್ತಿ : 10,000 ಕ್ಯೂಸೆಕ್ ನೀರು ಬಿಡುಗಡೆ