ಕರ್ನಾಟಕ

karnataka

ETV Bharat / state

KRS Dam: ಬರಿದಾಗ್ತಿದೆ ಕೆ​ಆರ್​ಎಸ್ ಡ್ಯಾಂ; ಕುಡಿಯುವ ನೀರಿಗೆ ಹಾಹಾಕಾರದ ಮುನ್ಸೂಚನೆಯೇ?

ಕೆ​ಆರ್​ಎಸ್ ಡ್ಯಾಂ ತುಂಬಲು ಮಳೆಗಾಗಿ ಪರ್ಜನ್ಯ ಜಪ, ಹೋಮ ಸೇರಿದಂತೆ ಧಾರ್ಮಿಕ ಕ್ರಿಯಾವಿಧಿಗಳನ್ನು ಮಾಡಿದರೂ ಮಳೆರಾಯನ ಆಗಮನವಾಗಿಲ್ಲ.

ಕೆ​ಆರ್​ಎಸ್ ಡ್ಯಾಂ
ಕೆ​ಆರ್​ಎಸ್ ಡ್ಯಾಂ

By

Published : Jun 19, 2023, 7:58 PM IST

ಮಂಡ್ಯ :ಜೂನ್ 3ನೇ ವಾರ ಬಂದರೂ ಸಹ ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಾಗಿಲ್ಲ. ಇದರ ಪರಿಣಾಮ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 80 ಅಡಿಗೆ ಕುಸಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ಕಾವೇರಿ ನೀರನ್ನು ಅವಲಂಬಿಸಿರುವ ಜನರು ಕುಡಿಯುವ ನೀರಿಗೂ ಸಮಸ್ಯೆ ಎದುರಿಸಬೇಕಾದ ದಿನಗಳು ಬರಲಿವೆ.

ಈಗಾಗಲೇ ಡ್ಯಾಂನ ಗೇಟ್‍ನ ಬಳಿ ನೀರಿಲ್ಲ. ಇಂತಹ ಪರಿಸ್ಥಿತಿ ಬಂದರೆ ಇರುವ ನೀರನ್ನು ಬಳಕೆ ಮಾಡಿಕೊಳ್ಳಲು, ಮುನ್ನೆಚ್ಚರಿಕೆಯಾಗಿ ಡ್ಯಾಂ ನಿರ್ಮಾಣದ ವೇಳೆಯೇ ಮಾಡಿರುವ ಒಳಭಾಗದ ನಾಲೆಯಿಂದ ಈಗ ಕುಡಿಯಲು ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ಈ ನಾಲೆಯಿಂದಲೂ ನೀರು ಬಿಡಲು ಸಾಧ್ಯವಿಲ್ಲ. ಪ್ರಸ್ತುತ ಡ್ಯಾಂನಲ್ಲಿ 10.811 ಟಿಎಂಸಿ ನೀರಿದೆ. ಈ ಪೈಕಿ 3.811 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಇದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಇದರ ನಡುವೆ ಮಳೆಗಾಗಿ ಪರ್ಜನ್ಯ ಜಪ, ಹೋಮ ಮಾಡಿದರೂ ಸಹ ವರುಣ ಕೃಪೆ ತೋರಲಿಲ್ಲ. ಇನ್ನೈದಾರು ದಿನಗಳಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಸಹ ಹಾಹಾಕಾರ ಎದುರಾಗಲಿದೆ.

ಇದನ್ನೂ ಓದಿ :ಬಾರದ ಮುಂಗಾರು ಮಳೆ: ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದ ದಾವಣಗೆರೆ ರೈತರಿಗೆ ನಿರಾಶೆ

ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಮುಂಗಾರು ಮಳೆಯನ್ನೇ ಆಶ್ರಯಿಸಿದ ರೈತರು ಮಳೆಯಾಗದೆ ತತ್ತರಿಸಿ ಹೋಗಿದ್ದಾರೆ. ಮಳೆಯಾಗುವ ಭರವಸೆಯಲ್ಲಿ ಈಗಾಗಲೇ ರೈತರು ಕೃಷಿ ಚುಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಲಕ್ಷಾಂತರ ರೂಪಾಯಿಗಳಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಆದರೆ, ಮಳೆ ಮಾತ್ರ ಇನ್ನೂ ಆಗದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಆಕಾಶದೆಡೆ ಮುಖ ಮಾಡಿ ಕುಳಿತ ರೈತರು : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ರೈತರು ಮಳೆ ಇಲ್ಲದೇ ಹೈರಾಣಾಗಿ ಹೋಗಿದ್ದು, ದೇವರ ಮೊರೆ ಹೋಗಿ ಕಂಬಳಿ ಬೀಸುವ ಮೂಲಕ ಮಳೆರಾಯನಿಗೆ ಆಹ್ವಾನಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಮೂಲಕ ವರುಣ ಕೃಪೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಮಲೆ ಕುಂಬಳೂರು ಗುಡ್ಡದ ಮೇಲಿರೋ ಕೊಲ್ಲಾಪುರ ಲಕ್ಷ್ಮೀಗೆ ಕಂಬಳಿ ಹಾಸಿ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದರು.

ಇದನ್ನೂ ಓದಿ :KRS ಜಲಾಶಯ ಖಾಲಿ ಖಾಲಿ.. ಮಳೆಗಾಗಿ ಪ್ರಾರ್ಥಿಸಿ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡರಿಂದ ಪರ್ಜನ್ಯ ಹೋಮ..

ABOUT THE AUTHOR

...view details