ಮಂಡ್ಯ : ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆ ಈಗ ರಾಜ್ಯಾದ್ಯಂತ ಸದ್ದು ಮಾಡ್ತಿದೆ. ಕಾರ್ಯಕರ್ತನೋರ್ವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಕೈಹಾಕಲು ಬಂದಿದ್ದಕ್ಕೆ ಡಿಕೆಶಿ ತಲೆಗೆ ಬಾರಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ.
ಕೆ.ಎಂ. ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ ಡಿ.ಕೆ.ಶಿವಕುಮಾರ್, ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೆಗಲ ಮೇಲೆ ಕೈ ಹಾಕಲು ಪ್ರಯತ್ನಿಸಿದ. ಈ ವೇಳೆ ಕಾರ್ಯಕರ್ತನ ತಲೆ ಮೇಲೆ ಹೊಡೆದು ಡಿಕೆಶಿ ಗರಂ ಆದರು.
ನೀವು ನಮ್ಮ ಹುಡುಗರು: ಕಾರ್ಯಕರ್ತನ ತಲೆಗೆ ಬಾರಿಸಿದ ಬಳಿಕ ಡಿಕೆಶಿ ನೀವೆಲ್ಲರೂ ನಮ್ಮ ಹುಡುಗರು. ಮಾಧ್ಯಮದವರು ಬೇರೆ ಅರ್ಥಮಾಡಿಕೊಳ್ಳುತ್ತಾರೆ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಬುದ್ಧಿಮಾತು ಹೇಳಿದರು.