ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಚುನಾವಣಾ ಕಾವು ತುಸು ಜಾಸ್ತಿನೇ ಇದೆ. ಈ ಮಧ್ಯೆ ಇಲ್ಲಿನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಲಕ್ಕಿ ಗೌಡ ಅವರನ್ನು ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಡಿಢೀರ್ ವರ್ಗಾವಣೆ ಮಾಡಿದೆ.
ಜಿಲ್ಲೆಯ ಕೆಲ ಅಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ದೂರಿದ ಬೆನ್ನಲ್ಲೇ ಈ ವರ್ಗಾವಣೆ ನಡೆದಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಹಲವು ಲೋಪದೋಷಗಳಿಂದ ಕೂಡಿದ್ದರೂ, ಅವುಗಳಿಗೆ ಸಲ್ಲಿಸಿದ ಆಕ್ಷೇಪಣೆ ಪರಿಗಣಿಸದೆ ಅಂಗೀಕರಿಸಲಾಗಿದೆ ಎಂದು ಸುಮಲತಾ ಆರೋಪಿಸಿದ್ದರು. ಸುಮಲತಾ ದೂರಿನ ಬಗ್ಗೆ ಹಾಗೂ ಚುನಾವಣಾಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿದ ಬೆನ್ನಲ್ಲೇ ಐಎಎಸ್ ಅಧಿಕಾರಿ ಯಾಲಕ್ಕಿಗೌಡ ಅವರನ್ನು ರಾಜ್ಯ ಸರ್ಕಾರವು ಕೇಂದ್ರ ಚುನಾವಣೆ ಆಯೋಗದ ಆದೇಶದ ಮೇರೆಗೆ ಎತ್ತಂಗಡಿ ಮಾಡಿದೆ.
ಯಾಲಕ್ಕಿಗೌಡರ ಸ್ಥಾನಕ್ಕೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ನಿಯೋಜೀಸಲಾಗಿದೆ. ಯಾಲಕ್ಕಿಗೌಡ ಅವರಿಗೆ ಸೇವಾ ಸ್ಥಳ ಇನ್ನೂ ನಿಗದಿ ಮಾಡಿಲ್ಲ.
ಹು-ಧಾ ಪಾಲಿಕೆ ಆಯುಕ್ತರ ವರ್ಗಾವಣೆ: ಚುನಾವಣೆ ದೂರಿನ ಹಿನ್ನೆಲೆಯಲ್ಲಿ ಮತೊಬ್ಬ ಹಿರಿಯ ಅಧಿಕಾರಿಯಾದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಅವರನ್ನೂ ಎತ್ತಂಗಡಿ ಮಾಡಲಾಗಿದೆ. ಪಿಯುಸಿ ಮಂಡಳಿಯ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ಅವರನ್ನು ಹು- ಧಾ ಮಹಾನಗರ ಪಾಲಿಕೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಮೊನ್ನೆಯಷ್ಟೇ ಕೇಂದ್ರ ಚುನಾವಣೆ ಆಯೋಗವು ಹಾಸನ ಸೇರಿದಂತೆ ಮೂವರು ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಇದನ್ನ ಲೆಕ್ಕಿಸದೇ ಇಂದು ಸಹ ಇಬ್ಬರು ಹಿರಿಯ ಅಧಿಕಾರಿಗಳನ್ನ ವರ್ಗಾಯಿಸಿ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದೆ.