ಮಂಡ್ಯ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಯುತ್ತಿವೆ. ಅನ್ನದಾತರ ಆಕ್ರೋಶದ ಬೆನ್ನಲ್ಲೇ ಶನಿವಾರ ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೃಷ್ಣರಾಜಸಾಗರ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ಈ ಬಾರಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ಪ್ರತಿನಿತ್ಯ 10 ರಿಂದ 12 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆಗೆ ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಬಗ್ಗೆ ಕರವೇ ಸ್ವಾಭಿಮಾನ ಬಣದ ರಾಜ್ಯಾಧ್ಯಕ್ಷ ಕೃಷ್ಣಗೌಡ ಮಾತನಾಡಿ, ಕಾವೇರಿ ವಿಚಾರವಾಗಿ ಕೆಆರ್ಎಸ್ಗೆ ಮುತ್ತಿಗೆ ಹಾಕಲು ಬಂದಿದ್ದು, ಮೊದಲಿಗೆ ರಾಮನಗರದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು. ನಂತರ ಮಂಡ್ಯದಲ್ಲೂ ಪ್ರತಿಭಟನೆ ನಡೆಸಲಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿರುವುದಾಗಿ ಸರ್ಕಾರ ಹೇಳಿದೆ. ಆದರೇ ಈವರೆಗೂ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಿಲ್ಲ. ಬದಲಿಗೆ ನೀರು ಹರಿಸುವ ಪ್ರಮಾಣ ಕಡಿಮೆಗೊಳಿಸಿದ್ದಾರೆ ಎಂದರು.