ಮಂಡ್ಯ:ರಾಜ್ಯದ ಎಲ್ಲ ಕಡೆ ಡಿಕೆಶಿ ಪರ ಹೋರಾಟ ನಡೆಯುತ್ತಿದೆ. ಆದರೆ ಇತ್ತ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅನರ್ಹ ಶಾಸಕ ತಮ್ಮ ಕ್ಷೇತ್ರದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾರೆ. ರೈತರ ಜಮೀನಿಗೆ ನೀರು ಹರಿಸಲು ಇನ್ನಿಲ್ಲದ ಕಸರತ್ತು ಆರಂಭ ಮಾಡಿದ್ದಾರೆ.
ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಜೆಡಿಎಸ್ ಅನರ್ಹ ಶಾಸಕ! - ಮಿಂಚಿನ ಸಂಚಾರ ಮಾಡುತ್ತಿರುವ ನಾರಾಯಣಗೌಡ
ಮೈತ್ರಿ ಸರ್ಕಾರದಿಂದ ಹೊರಬಂದು ಅನರ್ಹ ಶಾಸಕರಾಗಿರುವ ನಾರಾಯಣಗೌಡ ಇದೀಗ ಮತ್ತೆ ಕ್ಷೇತ್ರದ ಕಡೆ ಮುಖ ಮಾಡಿದ್ದು, ರೈತರ ಜಮೀನಿಗೆ ನೀರು ಹರಿಸುವ ಬಗ್ಗೆ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯ ಪಾಲಕ ಇಂಜಿನಿಯರ್ಗಳಿಗೆ ಸೂಚನೆ ನೀಡಿದ್ದಾರೆ.

ಹಾಸನದ ಗೊರೂರು ಜಲಾಶಯದ ಬಲದಂಡೆ ನಾಲೆಯ ಮೂಲಕ ನೀರು ಹರಿಸಿ ಕೆಆರ್ ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಅನರ್ಹ ಶಾಸಕ ನಾರಾಯಣಗೌಡ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ಬಳಿ ನಾಲೆಯ ಮೇಲೆ ಮೋಟಾರ್ ಬೈಕಿನಲ್ಲಿ ಸಂಚರಿಸಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು.
ಹಳೆ ಮೈಸೂರು ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ಗಳಿಗೆ ಸೂಚನೆ ನೀಡಿದ ಅನರ್ಹ ಶಾಸಕ ನಾರಾಯಣಗೌಡ, 39ನೇ ವಿತರಣಾ ನಾಲೆಗೆ ನೀರನ್ನು ಹರಿಸಿ ಹಂಗ್ರಳಮ್ಮನ ಕೆರೆ, ಚೌಡ ಸಮುದ್ರ, ಸಾಕ್ಷೀಬೀಡು, ಅಡಿಕೆ ಕಟ್ಟೆ, ಬೀರವಳ್ಳಿ, ಗದ್ದೆ ಹೊಸೂರು, ಮಂಚೀಬೀಡು, ದಡದಹಳ್ಳಿ ಸೇರಿದಂತೆ 20 ಕ್ಕೂ ಹೆಚ್ಚಿನ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ತಿಳಿಸಿದರು. ಒಂದು ವೇಳೆ ಈ ಕೆಲಸ ಆಗದಿದ್ದರೆ ಮೈಸೂರಿನ ನೀರಾವರಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.