ಮಂಡ್ಯ: ಶಿವಮೊಗ್ಗದಲ್ಲಿ ಒಂದೇ ಅಲ್ಲ, ಮಂಡ್ಯದಲ್ಲೂ ಕೂಡ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್ ಗೌಡ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನಾಗಮಂಗಲವಾದ ನನ್ನ ಕ್ಷೇತ್ರದಲ್ಲಿ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹೇಳೋರು ಕೇಳೋರು ಯಾರು ಇಲ್ಲ. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರಿಗೆ ಜಿಲೆಟಿನ್ ಕಡ್ಡಿ ಹೇಗೆ ಸಿಗುತ್ತೆ?, ಬ್ಲಾಸ್ಟಿಂಗ್ ಮೆಟೀರಿಯಲ್ ಹೇಗೆ ತರುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ ಅವರು, ಕೆಲವರು ತಮಗೆ ಇಷ್ಟ ಬಂದ ಹಾಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಹಲವಾರು ಸಭೆಗಳಲ್ಲಿ ಈ ಕುರಿತು ಗಮನಕ್ಕೆ ತಂದಿದ್ದೇನೆ. ನನ್ನ ಕ್ಷೇತ್ರದಲ್ಲೇ ಏನು ಮಾಡೋಕೆ ಆಗುತ್ತಿಲ್ಲ. ಇವ್ರು ಯಾರ್ ಯಾರಿಗೆ ಲೈಸೆನ್ಸ್ ಕೊಡ್ತಾರೋ, ಎಷ್ಟು ಜನ ಲೈಸೆನ್ಸ್ ತಗೊಂಡು ಹೋಗುತ್ತಾರೆ ಎಂದು ಯಾರಿಗೂ ಗೊತ್ತೇ ಇಲ್ಲ, ಸುಮಾರು ಒಂದು ವರ್ಷದಲ್ಲಿ 18 ಜನರಿಗೆ ಲೈಸೆನ್ಸ್ ಕೊಟ್ಟಿದ್ದಾರೆ ಅಂತಾ ಹೇಳ್ತಿದ್ದಾರೆ ಎಂದು ದೂರಿದರು.
ಕಾನೂನು ಪ್ರಕಾರ ನಡೆಯುತ್ತಿರುವ ಗಣಿಗಾರಿಕೆ ಒಂದು ಕೂಡ ನನ್ನ ಕ್ಷೇತ್ರದಲ್ಲಿಲ್ಲ. ಆದ್ರು ಅವ್ರು 10-15 ವರ್ಷಗಳಿಂದ ಗಣಿಗಾರಿಕೆ ನಡೆಸಿಕೊಂಡು ಬರ್ತಿದ್ದಾರೆ. ಸರ್ಕಾರಕ್ಕೆ ಇದುವರೆಗೂ ಒಂದು ರೂಪಾಯಿ ಹಣ ಕಟ್ಟಿಲ್ಲ. ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ಬಳಸಿಕೊಳ್ತಿದ್ದಾರೆ. ನಮ್ಮ ಬೆಂಬಲಿಗರು ಗಣಿಗಾರಿಕೆ ಮಾಡಲು ಹೋದ್ರೆ ತಕ್ಷಣ ಬಂದು ನಿಲ್ಲಿಸುತ್ತಾರೆ. ಅದ್ರೆ ಬೇರೆಯವರಿಗೆ ಬಿಡುತ್ತಾರೆ, ಹೀಗಾಗಿ ಜಿಲ್ಲೆಯಲ್ಲಿ ಈ ತರ ದಂಧೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.