ಮಂಡ್ಯ: ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಮತ್ತಷ್ಟು ರೂಪುರೇಷೆ ಸಿದ್ಧಪಡಿಸುತ್ತಿದೆ. ಇತ್ತ ಮೋದಿ ಆಗಮನಕ್ಕೆ ಜೆಡಿಎಸ್ ಶಾಸಕರು ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ಕೆ. ಅನ್ನದಾನಿ, ಮಂಡ್ಯ ದೇವೇಗೌಡ ಅವರ ಭದ್ರಕೋಟೆ. ಇದನ್ನೂ ಯಾರಿಂದಲೂ ಭೇದಿಸಲು ಸಾಧ್ಯವಿಲ್ಲ. ಈ ಕೋಟೆ ಭೇದಿಸಲು ಪ್ರಧಾನಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಯಾರಾದರೂ ಬರಲಿ. ಯಾರೇ ಬಂದರು ಜಿಲ್ಲೆಯ ಜನ ಅವರ ಕೈ ಹಿಡಿಯಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರು ಬಹಳ ಪ್ರಯತ್ನ ಮಾಡಿದ್ದರು. ಆದರೆ ಅವರಿಂದಲೂ ಸಾಧ್ಯವಾಗಿಲ್ಲ ಎಂದರು.
7 ಸ್ಥಾನಗಳನ್ನೂ ಗೆಲ್ಲುತ್ತೇವೆ: ಯಾರೇ ಬಂದರೂ ಈ ಜಿಲ್ಲೆಯಲ್ಲಿ ದೇವೇಗೌಡ್ರ ಗಟ್ಟಿ ನೆಲೆಯನ್ನ ಅಲ್ಲಾಡಿಸಲು ಆಗಲ್ಲ. ನಾವು ಗೆಲ್ಲಬೇಕು, ನಾವು ಗೆಲ್ಲಬೇಕು ಎನ್ನುತ್ತಿದ್ದಾರೆ. ಕುಮಾರಣ್ಣ ಸಿಎಂ ಆಗಿದ್ದಾಗ ಹೆಚ್ಚು ಕಾರ್ಯಕ್ರಮ ಕೊಟ್ಟಿದ್ದಾರೆ. ಮಂಡ್ಯ ಜನರು ಕುಮಾರಣ್ಣನನ್ನು ಮೆಚ್ಚಿಕೊಂಡಿದ್ದಾರೆ. ಕಾವೇರಿ ವಿಚಾರವಾಗಿ ಹೋರಾಟ ಮಾಡಿದ್ದು ಹೆಚ್ ಡಿ ದೇವೇಗೌಡರು. ಮಂಡ್ಯ ಜಿಲ್ಲೆಯಲ್ಲಿ ಅವರ ಗಟ್ಟಿ ನೆಲೆ ಇದೆ. ನಾವು ಮತ್ತೆ ಏಳಕ್ಕೆ ಏಳು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿ ಟಿ ರವಿಗೆ ಎಚ್ಚರಿಕೆ: ಮಾಜಿ ಪ್ರಧಾನಿ ಹೆಚ್ಡಿಡಿ ಅವರ ಸಾವಿನ ಬಗ್ಗೆ ನಾಲಿಗೆ ಹರಿಬಿಟ್ಟದ್ದ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ದೇವೇಗೌಡರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ಅವರ ಬಗ್ಗೆ ಮಾತನಾಡುವ ಮಟ್ಟಕ್ಕೆ ಸಿ.ಟಿ ರವಿ ಇನ್ನೂ ಹೋಗಿಲ್ಲ. ಪ್ರಧಾನಿ ಮೋದಿ ಅವರು ದೇವೇಗೌಡರ ಬಗ್ಗೆ ಬಹಳ ಅಭಿಮಾನ ಇಟ್ಟಿದ್ದಾರೆ. ಈ ಬಗ್ಗೆ ಅವರು ರಿಯಾಕ್ಟ್ ಮಾಡಬೇಕಿತ್ತು. ರಾಜ್ಯದಲ್ಲಿ ಈಗಾಗಲೇ ಸಿ ಟಿ ರವಿ ಹೇಳಿಕೆ ಖಂಡಿಸಿದ್ದೇವೆ. ಅವರು ಈ ರೀತಿ ನಡೆದುಕೊಳ್ಳಬಾರದು. ದೇವೇಗೌಡ್ರು ಎಲ್ಲಾ ವರ್ಗವನ್ನು ಮೀರಿ ನಿಂತಿರುವ ನಾಯಕ. ಅವರ ಬಗ್ಗೆ ಮಾತನಾಡಬೇಕಾದರೆ ಸ್ಪಲ್ಪ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದರು.