ಕರ್ನಾಟಕ

karnataka

ETV Bharat / state

ಜೆಡಿಎಸ್​ ಶಾಸಕರು-ಸಂಸದೆ ಸುಮಲತಾ ನಡುವೆ ಹೊಸ ಸಮರಕ್ಕೆ ನಾಂದಿ ಹಾಡಿದ ಆಕ್ಸಿಜನ್ - ಸಂಸದೆ ಸುಮಲತಾ ಅಂಬರೀಶ್ ಕೊಡಿಸಿದ್ದಾರೆನ್ನಲಾದ ಆಕ್ಸಿಜನ್ ವಿಚಾರ

ಸಂಸದೆ ಸುಮಲತಾ ಅವರು ಸ್ವಂತ ಹಣದಲ್ಲಿ ಆಕ್ಸಿಜನ್ ಕೊಡಿಸಿರುವುದೇ ಸುಳ್ಳು ಎಂದು ಜೆಡಿಎಸ್ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್​ ಶಾಸಕರು-ಸಂಸದೆ ಸುಮಲತಾ ನಡುವೆ ಹೊಸ ಸಮರ
ಮಂಡ್ಯದಲ್ಲಿ ಜೆಡಿಎಸ್​ ಶಾಸಕರು-ಸಂಸದೆ ಸುಮಲತಾ ನಡುವೆ ಹೊಸ ಸಮರ

By

Published : May 9, 2021, 10:22 AM IST

ಮಂಡ್ಯ: ರಾಜ್ಯದಲ್ಲಿ ಕೊರೊನಾ ಉಲ್ಬಣಿಸಿದಂತೆ ಆಕ್ಸಿಜನ್ ಕೊರತೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಆದ್ರೆ ಸಕ್ಕರೆ ನಾಡಿನಲ್ಲಿ ಆಕ್ಸಿಜನ್ ವಿಚಾರ ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಹೊಸ ಸಮರ ಸೃಷ್ಟಿಸಿದೆ. ಸಂಸದೆ ಸುಮಲತಾ ಅಂಬರೀಶ್ ಕೊಡಿಸಿದ್ದರು ಎನ್ನಲಾದ ಆಕ್ಸಿಜನ್ ವಿಚಾರ ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯದಲ್ಲಿ ಜೆಡಿಎಸ್​ ಶಾಸಕರು-ಸಂಸದೆ ಸುಮಲತಾ ನಡುವೆ ಹೊಸ ಸಮರ

ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ಇಡೀ ದೇಶವೇ ತತ್ತರಿಸಿದೆ. ಸೋಂಕಿತರ ಸಂಖ್ಯೆ ಏರಿಕೆಯಾದಂತೆ ರಾಜ್ಯಾದ್ಯಂತ ಆಕ್ಸಿಜನ್ ಅಭಾವ ಕೂಡ ಹೆಚ್ಚಾಗಿದೆ. ಮಂಡ್ಯದಲ್ಲೂ ಕೂಡ ಆಕ್ಸಿಜನ್ ಸಮಸ್ಯೆ ಉಲ್ಬಣಿಸಿದ್ದು, ಅದನ್ನು ಪೂರೈಸಲು ಜಿಲ್ಲಾಡಳಿತ ಹರಸಾಹಸಪಡ್ತಿದೆ. ಈ ನಡುವೆ ಇತ್ತೀಚೆಗಷ್ಟೇ ಸುಮಲತಾ ಅಂಬರೀಶ್ ಅವರು ಮಂಡ್ಯಕ್ಕೆ ಪ್ರತನಿತ್ಯ ಸ್ವಂತ ಹಣದಿಂದ 20 ಸಿಲಿಂಡರ್ ಆಕ್ಸಿಜನ್ ಸಿಲಿಂಡರ್ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ 38 ಜಂಬೋ ಸಿಲಿಂಡರ್ ಆಕ್ಸಿಜನ್ ನೀಡಿರುವುದಾಗಿ ಸ್ವತಃ ಸುಮಲತಾ ಅವ್ರೇ ಹೇಳಿಕೊಂಡಿದ್ದಾರೆ.

ಇದೇ ವಿಚಾರ ಜೆಡಿಎಸ್ ಶಾಸಕರು ಹಾಗೂ ಸಂಸದೆ ನಡುವಿನ ವಾಗ್ದಾಳಿಗೆ ಕಾರಣವಾಗಿದೆ. ಸುಮಲತಾ ಅವ್ರು ಸ್ವಂತ ಹಣದಲ್ಲಿ ಆಕ್ಸಿಜನ್ ಕೊಡಿಸಿರುವುದೇ ಸುಳ್ಳು ಎಂದು ಜೆಡಿಎಸ್ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ನೀಡಿರುವ ಸಿಲಿಂಡರ್ ತಂದು ತಾನೇ ಕೊಟ್ಟಿದ್ದು ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ನಂಬಿಸುವ ಅಗತ್ಯ ಏನಿದೆ? ಸಂಸದೆ ಸುಮಲತಾ ಮಂಡ್ಯ ಜನರಿಗೆ ನಂಬಿಕೆ ದ್ರೋಹ ಮಾಡ್ತಿದ್ದಾರೆ. ಪ್ರಚಾರದ ಗಿಮಿಕ್​ಗಾಗಿ ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಅಂಬರೀಶ್ ಕುಟುಂಬದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದೇವೆ. ಸ್ವಾರ್ಥಕ್ಕಾಗಿ ಇಂತಹ ಸಂದರ್ಭ ಉಪಯೋಗಿಸಿಕೊಳ್ಳುವುದು ತಪ್ಪು. ಇದ್ರಿಂದ ಅಂಬರೀಶ್ ಅವರ ಗೌರವ ಹಾಳಾಗುತ್ತದೆ ಎಂದು ಗುಡುಗಿದ್ದಾರೆ.

ಶಾಸಕರ ಆರೋಪಕ್ಕೆ ತನ್ನದೇ ದಾಟಿಯಲ್ಲಿ ತಿರುಗೇಟು ನೀಡಿರುವ ಸುಮಲತಾ, ಮಂಡ್ಯದ ಪ್ರತಿ ಉಸಿರಿನಲ್ಲಿ ಅಂಬರೀಶ್ ಇದ್ದಾರೆ. ಆ ಉಸಿರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಸ್ವಂತ ದುಡ್ಡು, ಸರ್ಕಾರಿ ದುಡ್ಡು ಅನ್ನುವ ಯೋಚನೆ ನನಗಿಲ್ಲ. ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ 3 ಲಕ್ಷ ಲೀಟರ್ ಆಕ್ಸಿಜನ್ ಕೊಡಿಸಿದ್ದಕ್ಕೆ ದಾಖಲೆ ಕೊಟ್ಟು, ಅದಕ್ಕೆ ಪ್ರತಿಯಾಗಿ ಆಸ್ಪತ್ರೆ ಆಡಳಿತ ಮಂಡಳಿ ಸಂಸದರನ್ನ ಅಭಿನಂದಿಸಿ, ಪ್ರಶಂಸಿರುವ ವಿಡಿಯೋ ಹರಿಬಿಟ್ಟಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಕೂಡ ಹಂಚಿಕೊಂಡು, ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

For All Latest Updates

ABOUT THE AUTHOR

...view details