ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಡಾ.ರಮೇಶ್ ಮಂಡ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಂಡಾಯ ಎದ್ದಿರುವ ಶಾಸಕ ಎಂ.ಶ್ರೀನಿವಾಸ್ ಮನೆಗೆ ಜೆಡಿಎಸ್ ನಿಯೋಗ ಭೇಟಿ ಕೊಟ್ಟು ಮನವೊಲಿಸುವ ಯತ್ನ ನಡೆಯಿತು.
ಶಾಸಕ ಶ್ರೀನಿವಾಸ್ ಮನೆಗೆ ಭೇಟಿ ನೀಡಿದ ಡಾ.ರಮೇಶ್ ಬಂಡಾಯ ಶಮನಕ್ಕೆ ಮುಂದಾದರು. ಜೆಡಿಎಸ್ ಟಿಕೆಟ್ ಅನ್ನು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರಗೆ ನೀಡಿದ ಹಿನ್ನೆಲೆ ಶಾಸಕ ಶ್ರೀನಿವಾಸ್ ಬಂಡಾಯ ಎದ್ದು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಡಾ.ರಮೇಶ್ ನಿಯೋಗ, ಅಧಿಕೃತ ಅಭ್ಯರ್ಥಿ ರಾಮಚಂದ್ರಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಂಡಾಯಗಾರರ ಮನವೊಲಿಸಲು ಮುಂದಾದ ಡಾ.ರಮೇಶ್ ಅವರಿಗೆ ಅಭ್ಯರ್ಥಿ ರಾಮಚಂದ್ರ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಮತ್ತಿತರರ ಸಾಥ್ ನೀಡಿದರು.
ಈ ವೇಳೆ, ನನಗೆ ಸಫೋರ್ಟ್ ಮಾಡಿ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂಡಾಯ ನಾಯಕನ ಕಾಲಿಗೆ ಕಾಲು ಹಿಡಿಯಲು ಹೋಗಿದ್ದಾರೆ. ಬಂಡಾಯ ಏಳಬೇಡಿ ಎಂದು ಕಾಲು ಹಿಡಿಯಲು ಹೋದಾಗ ಆಗ ನಾನು ಸಫೋರ್ಟ್ ಮಾಡಲ್ಲ ಹೋಗು ಎಂದು ಶ್ರೀನಿವಾಸ್ ನೂಕಿದ್ದಾರೆ. ರಾಮಚಂದ್ರಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಶ್ರೀನಿವಾಸ್ ಬಂಡಾಯ ಎದ್ದಿದ್ದಾರೆ.
ಬಂಡಾಯವೇ ಹೊರತು ಸಂಧಾನವಲ್ಲ: "ನನ್ನ ನಿರ್ಧಾರ ಅಚಲ, ಬದಲಾಗುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಮಗ ರಮೇಶ್ ಸಂಧಾನಕ್ಕೆ ಬಂದಿದ್ದರು. ದೂರವಾಣಿ ಮೂಲಕ ಸಹ ನಾಯಕರ ಜತೆ ಮಾತನಾಡಿಸಿದರು. ನಾನು ಯಾರ ಮಾತಿಗೆ ಒಪ್ಪಲ್ಲ. ನಾವು ಬಂಡಾಯವಾಗಿ ಸ್ಪರ್ಧಿಸೋದು ಖಚಿತ. ಮೂರು ಜನರ ಪೈಕಿ ಒಬ್ಬರು ಕಣದಲ್ಲಿ ಇರ್ತಾರೆ. ಬೆಂಬಲಿಗರ ಸಭೆ ಕರೆದಿದ್ದೇನೆ. ಆ ಸಭೆಯಲ್ಲಿ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತೇವೆ. ನಮ್ಮ ಅಂತಿಮ ತೀರ್ಮಾನ ಬಂಡಾಯವೇ ಹೊರತು ಸಂಧಾನವಲ್ಲ" ಎಂದು ಜೆಡಿಎಸ್ ನಿಯೋಗದ ಭೇಟಿ ಬಳಿಕ ಶಾಸಕ ಎಂ.ಶ್ರೀನಿವಾಸ್ ಸ್ಪಷ್ಟನೆ ನೀಡಿದರು.