ಮಂಡ್ಯ :ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿ ವೇಳೆ ಪಟಾಕಿ ಮತ್ತು ತಮಟೆ ಸದ್ದಿಗೆ ಅಂಬಾರಿ ಹೊತ್ತಿದ್ದ ಆನೆ ಮತ್ತು ಅದರ ಜೊತೆಯಲ್ಲಿದ್ದ ಮತ್ತೊಂದು ಆನೆ ಬೆಚ್ಚಿ ಜನರತ್ತ ಓಡಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣದ ಕಿರಂಗೂರು ಬನ್ನಿ ಮಂಟಪದ ಬಳಿ ಆನೆಯು ಅಂಬಾರಿ ಹೊತ್ತು ಜಂಬೂ ಸವಾರಿ ನಡೆಸುತ್ತಿದ್ದ ವೇಳೆ ಎರಡು ಆನೆಗಳು ಪಟಾಕಿ-ತಮಟೆ ಶಬ್ಧಕ್ಕೆ ಬೆಚ್ಚಿ ಎರಡು ಸುತ್ತು ತಿರುಗಿ ಜನರತ್ತ ನುಗ್ಗಿದೆ. ತಕ್ಷಣವೇ ಆನೆ ವೈದ್ಯರು ಮತ್ತು ಮಾವುತರು ಆನೆಗಳನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಪಟಾಕಿ-ತಮಟೆ ಸದ್ದಿಗೆ ಬೆಚ್ಚಿದ ಆನೆಗಳು ಆನೆಗಳ ವರ್ತನೆಯಿಂದ ಜಂಬೂ ಸವಾರಿ ನೋಡಲು ಬಂದಿದ್ದ ಜನರು ದಿಕ್ಕಾ ಪಾಲಾಗಿ ಓಡಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಆನೆಗಳನ್ನು ನಿಯಂತ್ರಣಕ್ಕೆ ತಂದ ಕೂಡಲೇ ಗೋಪಾಲ ಎನ್ನುವ ಆನೆಯ ಮೇಲೆ ಕಟ್ಟಿದ್ದ ಮರದ ಅಂಬಾರಿ ಕೆಳಗಿಳಿಸಿ ಸಿದ್ದವಾಗಿರಿಸಿದ್ದ ರಥದ ಮಾದರಿಯ ವಾಹನದ ಮೂಲಕ ಅಂಬಾರಿ ಮೆರವಣಿಗೆ ಮುಂದುವರೆಸಲಾಯ್ತು.
ಇಂದಿನಿಂದ ಮೂರುದಿನಗಳ ಕಾಲ ನಡೆಯುವ ದಸರಾಗೆ ಶುಭ ಕುಂಭ ಲಗ್ನದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲನಂದನಾಥ ಸ್ವಾಮೀಜಿಯವರು ಮರದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ದಸರಾ ವೈಭವಕ್ಕೆ ಚಾಲನೆ ನೀಡಿದ್ದರು. ಈ ವೇಳೆ ನಗಾರಿ, ಡೋಲು, ಕೋಲಾಟ, ಜಾನಪದ ಸೇರಿದಂತೆ 25ಕ್ಕೂ ಹೆಚ್ಚು ಕಲಾತಂಡಗಳು ಶ್ರೀರಂಗಪಟ್ಟಣ ದಸರಾಗೆ ಮತ್ತಷ್ಟು ಮೆರುಗು ತಂದವು.