ಮಂಡ್ಯ: ವಿನಾಶದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ವಿಶ್ವದಲ್ಲಿ ಮಾರ್ಚ್ 20 ಅನ್ನು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಣೆ ಮಾಡಲಾಗ್ತಿದೆ. ಇತ್ತೀಚೆಗೆ ಗುಬ್ಬಚ್ಚಿ ರಕ್ಷಣೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆ. ಆದ್ರೆ, ಇಲ್ಲೊಂದು ಕುಟುಂಬ ಮಾತ್ರ ಈ ಅಳಿವಿನಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದೆ.
ಗುಬ್ಬಿಗಳಿಗಾಗಿ ಮನೆ ನಿರ್ಮಿಸಿದ ಕುಟುಂಬ :ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆ. ಈ ದಿನವನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್‌ನಲ್ಲಿರೋ ಜಯರಾಂ ರಾವ್ ಎಂಬುವರ ಕುಟುಂಬ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರ್ತಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರೋ ಜಯರಾಂ, ತಮ್ಮದೇ ಆದ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸ್ತಿದ್ದಾರೆ.
ಇವರ ಮನೆಯಲ್ಲಿ ನೂರಾರು ಗುಬ್ಬಿಗಳನ್ನು ಸಂರಕ್ಷಣೆ ಮಾಡ್ತಾ ಅವುಗಳ ಚೀಂವ್ ಚೀಂವ್ ಕಲರವ ಕೇಳ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಗುಬ್ಬಚ್ಚಿಗಳಿಗಾಗಿ ಪಿವಿಸಿ ಪೈಪ್ನಲ್ಲಿ ಅವುಗಳಿಗೆ ನೂರಾರು ಗೂಡು ನಿರ್ಮಿಸಿ ಸಂರಕ್ಷಣೆ ಮಾಡ್ತಿದ್ದಾರೆ.
ಗುಬ್ಬಚ್ಚಿಗಳಿಗಾಗಿ ಆಹಾರ ಮತ್ತು ನೀರಿಗೆ ವಿಶೇಷ ವ್ಯವಸ್ಥೆ ಮಾಡಿ. ಅವುಗಳ ಆಹಾರಕ್ಕೆ ನವಣೆ ಮತ್ತು ಆರ್ಕಾ ಧಾನ್ಯವನ್ನು ತಂದು ಅದನ್ನ ನಿರುಪಯುಕ್ತ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ತೂಗಿ ಹಾಕಿದ್ರೆ, ಅಲ್ಲಲ್ಲಿ ಭತ್ತದ ತೆನೆ ಕಟ್ಟಿದ್ದಾರೆ. ಅಲ್ಲದೆ ನೀರಿಗಾಗಿ ಅವುಗಳಿಗೆ ತಮ್ಮ ಮನೆಯ ಹೊರಗೆ ವಿಶೇಷ ಮಾದರಿಯಲ್ಲಿ ಚಿಕ್ಕ ಜಲಪಾತ ಹಾಗೂ ಕೊಳವನ್ನು ನಿರ್ಮಿಸಿದ್ದಾರೆ.