ಮಂಡ್ಯ:ನಿಗೂಢ ಶಬ್ದ ಇಂದು ಮಧ್ಯಾಹ್ನ ಸುಮಾರು 2:05ರ ಸಮಯದಲ್ಲಿ ಕೇಳಿ ಬಂದಿದ್ದು, ಕೆಆರ್ಎಸ್ ವ್ಯಾಪ್ತಿಯ ಜನರನ್ನು ಬೆಚ್ಚಿಬೀಳಿಸಿದೆ.
ಹೌದು, ಇಂದು ಕೆಆರ್ಎಸ್ ವ್ಯಾಪ್ತಿಯಲ್ಲಿ ಎರಡು ಬಾರಿ ನಿಗೂಢ ಶಬ್ದ ಕೇಳಿಬಂದಿದ್ದು, ಈ ಶಬ್ದದ ಹಿಂದೆ ಅಕ್ರಮ ಕಲ್ಲು ಗಣಿಗಾರಿಕೆಯ ಕೈವಾಡದ ಶಂಕೆ ವ್ಯಕ್ತವಾಗಿದೆ. ಕಳೆದ, ಆರೇಳು ತಿಂಗಳ ಹಿಂದೆಯೂ ಇದೇ ರೀತಿಯ ಶಬ್ದ ಕೇಳಿಬಂದಿದ್ದು, ಭೂ ಕಂಪನ ಮಾಪಕ ಕೇಂದ್ರದಲ್ಲಿ ಶಬ್ದದ ಮೂಲ ದಾಖಲಾಗಿತ್ತು.
ಕೆಆರ್ಎಸ್ ಬಳಿ ಅಕ್ರಮ ಕಲ್ಲು ಗಣಿಗಾರಿಕೆಯ ಶಂಕೆ ಹಾಗಾಗಿ, ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಳಲ್ಲಿ ಸ್ಫೋಟಕ ಬಳಕೆ ಮಾಡುತ್ತಿರುವುದೇ ಶಬ್ದಕ್ಕೆ ಕಾರಣ ಎಂದು ಹೇಳಲಾಗಿದೆ. ರಿಗ್ ಬೋರ್ ಹಾಕಿ ಸ್ಫೋಟಕ ಸಿಡಿಸಿದರೆ ಈ ರೀತಿಯ ಶಬ್ದ ಬರುವ ಸಾಧ್ಯತೆ ಇದ್ದು, ಇಂದಿನ ಶಬ್ದಕ್ಕೆ ರಿಗ್ ಬೋರ್ ಸ್ಫೋಟಕ ಕಾರಣ ಎನ್ನಲಾಗಿದೆ.
ಕಳೆದ ಆರೇಳು ತಿಂಗಳ ಹಿಂದೆ ಕೇಳಿ ಬಂದಿದ್ದ ಶಬ್ದಗಳ ಮೂಲ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಸ್ಫೋಟಕಗಳಿಂದ ಕೆಆರ್ಎಸ್ಗೆ ಅಪಾಯವಿದೆ ಎಂದು ರೈತರು, ಹೋರಾಟಗಾರರು ಹೋರಾಟ ಮಾಡಿದ್ದರು. ಅಂದಿನಿಂದ ಅಲ್ಲಿ ಸ್ಫೋಟಕ ಬಳಕೆಗೆ ನಿಷೇಧ ಹೇರಲಾಗಿತ್ತು. ಆದರೆ ಮತ್ತೆ ಸ್ಫೋಟಕದ ಶಬ್ದ ಬಂದಿರೋದು ಅನುಮಾನಕ್ಕೆ ಕಾರಣವಾಗಿದೆ.