ಮಂಡ್ಯ: ಸರ್ಕಾರದ ಪರವಾನಗಿ ಇಲ್ಲದೇ ಇಷ್ಟು ವರ್ಷಗಳು ಅಲ್ಲಿ 35 ಕ್ಕೂ ಹೆಚ್ಚು ಸ್ಟೋನ್ ಕ್ರಷರ್‌ಗಳು, ಲಕ್ಷ ಟನ್ ಗಟ್ಟಲೆ ಕಲ್ಲನ್ನು ಪುಡಿ ಮಾಡಿವೆ. ಮಾಲೀಕರು ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ.
ಬೆಟ್ಟದಲ್ಲಿ ಇಷ್ಟು ದಿನ ನಡೆದಿದ್ದು ಅಕ್ರಮ ಗಣಿಗಾರಿಕೆಯೇ?: ’ಸಿಬಿಐ ತನಿಖೆ ಆಗಲೇಬೇಕೆಂದು ಒತ್ತಾಯ - 144 ಸೆಕ್ಷನ್ ಜಾರಿ
ಕೆ.ಆರ್.ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಎಂ.ಪಾಟೀಲ್, ಅಣೆಕಟ್ಟೆಯ ಸುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ, ಸ್ಟೋನ್ ಕ್ರಷರ್‌ಗಳನ್ನು ನಿಷೇಧಿಸಿ, 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಪತ್ರದಲ್ಲಿ ತಹಶೀಲ್ದಾರ್ ಮಾಡಿರುವ ಉಲ್ಲೇಖ ಸಾರ್ವಜನಿಕವಾಗಿ ಆತಂಕ ಮೂಡಿಸಿದೆ. ತಹಶೀಲ್ದಾರ್ ತಮ್ಮ ಆದೇಶದ ಪ್ರತಿಯಲ್ಲಿ ಸದರಿ ಪ್ರದೇಶದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವರದಿ ಬಗ್ಗೆಯೂ ತಿಳಿಸಿದ್ದು, ಇದು ಗಣಿ ಮಾಲೀಕರ ಲೂಟಿಯನ್ನು ತೋರಿಸುತ್ತಿದೆ. ಜಿಲ್ಲಾಧಿಕಾರಿಗಳೇ ಹೇಳುವ ಪ್ರಕಾರ ಅಲ್ಲಿ ಕೇವಲ ಕೆಲವೇ ಸ್ಟೋನ್ ಕ್ರಷರ್‌ಗಳಿಗೆ ಸಿ ಫಾರಂ ಸಿಕ್ಕಿದೆ. ಮಿಕ್ಕ 90 ಕ್ಕೂ ಹೆಚ್ಚು ಕ್ರಷರ್‌ಗಳಿಗೆ ಅನುಮತಿಯೇ ಇಲ್ಲ ಎಂಬ ಮಾಹಿತಿ ಹೊರ ಹಾಕಿದ್ದಾರೆ. ಹಾಗಾಗಿ ಪಾಂಡವಪುರ ತಾಲೂಕಿನ ಬೇಬಿಬೆಟ್ಟ, ಚಿನಕುರಳಿ ಹಾಗೂ ರಾಗಿ ಮುದ್ದನಹಳ್ಳಿ ವ್ಯಾಪ್ತಿಯಲ್ಲಿ ಸ್ಟೋನ್ ಕ್ರಷರ್‌ಗಳಿಗೆ ಬೀಗ ಜಡಿದು, 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಆದೇಶ ಪ್ರತಿಯನ್ನು ನೋಡಿದರೆ ಲಕ್ಷಗಟ್ಟಲೆ ಟನ್ ಕಲ್ಲು ಅಕ್ರಮವಾಗಿ ಸಾಗಾಟವಾಗಿರುವುದು ಕಂಡು ಬರುತ್ತಿದೆ. ಅಲ್ಲದೆ ಕಲ್ಲಿನಿಂದ ಸರ್ಕಾರಕ್ಕೆ ಬರಬೇಕಾದ ಆದಾಯ ಹಾಗೂ ತೆರಿಗೆ ಮೋಸ ಆಗಿರುವುದು ಸತ್ಯವಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಕೂಗು ಜಿಲ್ಲೆಯಲ್ಲಿ ಕೇಳಿ ಬಂದಿದೆ. ದೊಡ್ಡವರ ಪ್ರಭಾವದಿಂದ ಬೇಬಿಯಾಗಿರುವ ಬೇಬಿ ಬೆಟ್ಟ, ಚಿನಕುರಳಿ ಕ್ವಾರೆ ಹಾಗೂ ರಾಗಿ ಮುದ್ದನಹಳ್ಳಿ ಕಲ್ಲಿನ ಆದಾಯದ ತನಿಖೆಯನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ಗಣಿಯಿಂದ ಕೆ.ಆರ್.ಎಸ್‌ಗೆ ಆಗುತ್ತಿರುವ ಅಪಾಯವನ್ನು ತಪ್ಪಿಸಬೇಕಾಗಿದೆ.