ಮಂಡ್ಯ:ಜಾತ್ಯತೀತ ಜನತಾದಳದ ಶಾಸಕಾಂಗ ನಾಯಕ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ 14 ತಿಂಗಳ ಆಡಳಿತದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆಂದು ಆಣೆ ಮಾಡುವುದಾದರೆ ಎಲ್ಲಿಗಾದರೂ ಬರಲಿ. ನಾವು ಬರಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವರ್ಗಾವಣೆ ಸೇರಿ ಆಡಳಿತದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂಬ ಬಗ್ಗೆ ಆಣೆ ಮಾಡುವುದಾದರೆ ಧರ್ಮಸ್ಥಳ ಸೇರಿದಂತೆ ಯಾವುದೇ ದೇವಾಲಯಕ್ಕೆ ಬಂದು ಪ್ರಮಾಣ ಮಾಡಿದರೂ, ನಾವು ಸಿದ್ಧರಿದ್ದೇವೆ, ಅವರು ಬರುತ್ತಾರಾ ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಆಪಾದನೆ:ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆಪಾದನೆ ಮಾಡಿ ಆಣೆ ಪ್ರಮಾಣಕ್ಕೆ ಸವಾಲು ಹಾಕುತ್ತಾರೆ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿನ ಬಗ್ಗೆ ಹಳೆಯದೆಲ್ಲ ಬೇಡ ಎನ್ನುತ್ತಾರೆ. ಅದನ್ನೆಲ್ಲ ಬಿಟ್ಟು ಬಿಡುತ್ತೇವೆ. 14 ತಿಂಗಳ ಆಡಳಿತ ಅವಧಿ ಬಗ್ಗೆ ಪ್ರಮಾಣ ಮಾಡಲಿ ಎಂದು ಒತ್ತಾಯಿಸಿದರು.
ಪಕ್ಷದಲ್ಲಿ 50 ಮಂದಿಗೆ ಸಿಎಂ ಆಗುವ ಅರ್ಹತೆ:ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ 50 ಮಂದಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಇದೆಲ್ಲವನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.