ಮಂಡ್ಯ:ಜೆಡಿಎಸ್ ಕುಟುಂಬ ರಾಜಕಾರಣ ಬಗ್ಗೆ ನಾನೇನು ಮಾತನಾಡುವುದಿಲ್ಲ. ಯಾಕಂದ್ರೆ ನನ್ನ ತಮ್ಮನೂ ರಾಜಕೀಯದಲ್ಲಿದ್ದಾನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಅಭ್ಯರ್ಥಿ ಗೂಳಿ ಗೌಡ ಪರ ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ, ಸಿದ್ದರಾಮಯ್ಯರೂ ಸಹ ಹಾಗೆ ಮಾತನಾಡುವುದಿಲ್ಲ. ಅವರ ಮಗನೂ ರಾಜಕಾರಣದಲ್ಲಿದ್ದಾನೆ ಎಂದರು.
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ
ಇಲ್ಲಿ ನಿಂತಿರುವುದು ಗೂಳಿ ಗೌಡರಲ್ಲ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ ಎಂದು ತಿಳಿದು ಮತ ಚಲಾಯಿಸಿ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಗೂಳಿ ಗೌಡ ನೋಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗಾಳಿ ಆರಂಭವಾಗಿದೆ. ಇಡೀ ರಾಜ್ಯದಲ್ಲಿ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿದ್ದಾರೆ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಆಗಲೇಬೇಕು. ಹಳೇ ಮೈಸೂರು ಭಾಗದ ರೈತರನ್ನು ರಕ್ಷಣೆ ಮಾಡಬೇಕು. ರಕ್ಷಣೆ ಮಾಡಬೇಕು ಎಂದರೆ ಮೇಕೆದಾಟು ಯೋಜನೆ ಆಗಬೇಕು. ಯೋಜನೆ ಪ್ರಾರಂಭವಾಗಲು ಎಲ್ಲಾ ಅನುಮತಿ ಸಿಕ್ಕಿದೆ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತದೆ. ಜನವರಿ ಮೊದಲ ವಾರದಿಂದ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತೇವೆ. 10 ರಿಂದ 15 ದಿನಗಳ ಕಾಲ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.