ಮಂಡ್ಯ: ಪಬ್ಲಿಸಿಟಿಗೋಸ್ಕರ ಮಾಡುವಂತಹ ರಾಜಕಾರಣ ನನಗೆ ಇಷ್ಟ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ತಮ್ಮ ಮೇಲೆ ಆರೋಪ ಮಾಡಿದವರಿಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೇಸ್ಬುಕ್ನಲ್ಲಿ ಸ್ವಾಭಿಮಾನಿ ಎರಡು ವರ್ಷ ಎಂದು ಪೋಸ್ಟ್ ಮಾಡಿದ್ದೆ. ಸುಮಾರು ಕಾಮೆಂಟ್ಸ್ ಹಾಗೂ ಲೈಕ್ಸ್ ಬಂದಿದೆ. ನಾಲ್ಕು ನೆಗೆಟಿವ್ ಕಾಮೆಂಟ್ ಹೈಲೆಟ್ ಮಾಡಿ ಸುದ್ದಿ ಬಂದಿತ್ತು.
ಇವರು ಮಂಡ್ಯ ಜಿಲ್ಲೆಗೆ ಬರ್ತಿಲ್ಲ ಎಂದು ಜೆಡಿಎಸ್ ನಾಯಕರು ಆರೋಪಿಸುವುದು ಎಷ್ಟು ಸರಿ? ಎಂದರಲ್ಲದೇ ಇದೆಲ್ಲಾ ರಾಜಕೀಯ ಕುತಂತ್ರ ಎಂದು ಕಿಡಿಕಾರಿದರು.
ನೀವು 7 ಜನ ಇದ್ದೀರಲ್ಲಾ ಅಚ್ಚುಕಟ್ಟಾಗಿ ಎಲ್ಲಾ ಕಡೆ ಹೋಗಿ ಕೆಲಸ ಮಾಡಿದ್ರೇ ಸಂಸದರನ್ನ ಜನರು ಕೇಳೋದೆ ಇಲ್ಲ. MLA, ZP, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ಗೂ MP ಬರಬೇಕು ಅಂದ್ರೆ ಜಿಲ್ಲೆಯಲ್ಲಿ ಯಾರು ಕೆಲಸ ಮಾಡುವವರು ಇಲ್ವಾ..? ಎಂದು ಪ್ರಶ್ನೆ ಮಾಡಿದರು.
ಸುಮಲತಾ ಬಿಟ್ರೆ ಯಾರು ಕೆಲಸ ಮಾಡುವವರು ಯಾರು ಇಲ್ಲ. ಅದಕ್ಕೆ ಜನ ಕೇಳ್ತಿದ್ದಾರೆ, ಸುಮಲತಾ ಅಂಬರೀಶ್ ಮಂಡ್ಯಕ್ಕೆ ಬರ್ತಿಲ್ಲ ಅಂತಾ. ಇದಕ್ಕೆ ಕಾರಣವನ್ನು ಅವರನ್ನೆ ಕೇಳಬೇಕು.
ನಮ್ಮಂತವರು ಬಂದರೆ ಆಸೆಯಿಂದ- ಪ್ರೀತಿಯಿಂದ ತುಂಬಾ ಜನ ಬರ್ತಾರೆ. ಹಾಗಾಗಿ, ಜನರನ್ನು ನಾವು ಕಂಟ್ರೋಲ್ ಮಾಡೋಕೆ ಆಗಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತರಹದ ರಾಜಕಾರಣ ಸರಿನಾ ಅಂತಾ ಯೋಚನೆ ಮಾಡಬೇಕು.?? ಎಂದು ಹೇಳಿದರು.
ನಾವು ಒಂದು ಕಡೆ ಹೋದರೆ ಜನ ಸೇರಿ ಸೋಂಕು ಹರಡುತ್ತದೆ. ನಾವು ಒಂದು ಆಸ್ಪತ್ರೆಯ ಬಳಿ ಹೋಗಿ ಫೋಟೋ ತೆಗೆದುಕೊಳ್ಳಬಹುದು. ಒಬ್ಬರ ಜೀವ ಉಳಿಸುವ ಕೆಲಸ ಆಗುತ್ತಾ..? ಎಂದು ಕೇಳಿದ್ರು. ಸುಮಲತಾ ಒಬ್ಬರನ್ನು ಬಿಟ್ಟು ಎಲ್ಲರೂ ಕೆಲಸ ಮಾಡ್ತಿದ್ದಾರಲ್ಲ, ಆದರೂ ಸೋಂಕು ಯಾಕೇ ಇದೇ ತರಹ ಇದೆ. ಪರಿಸ್ಥಿತಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕು ಎಂದರು.
ನಮ್ಮ ನಡೆ, ನಮ್ಮ ಮಾತು ಜನರಿಗೆ ಮಾದರಿಯಾಗಬೇಕು. ಮನೆಯಲ್ಲೆ ಇರಿ, ಮಾಸ್ಕ್ ಹಾಕಿಕೊಳ್ಳಿ ಅಂತಾ ಹೇಳಿ ನಾವೇ ಉಲ್ಲಂಘನೆ ಮಾಡಿದ್ರೇ ಹೇಗೆ..? ಪಬ್ಲಿಸಿಟಿ ಬೇಕು ಅನ್ನುವ ಹುಚ್ಚಲ್ಲಿ ಜನ ಸೇರಿಸುವುದು ಸರಿಯಲ್ಲ.
ಆ ರೀತಿಯ ರಾಜಕಾರಣ ಮಾಡೋಕೆ ನನಗೆ ಇಷ್ಟ ಇಲ್ಲ. ನನ್ನ ನಡೆ ಇವತ್ತು ನಾಲ್ಕು ಜನ ಇಷ್ಟವಾಗದಿದ್ರೂ ನನಗೆ ಬೇಜಾರಿಲ್ಲ. ನಾಳೆ ದಿನ ಅವರಿಗೆ ಅರ್ಥವಾಗುತ್ತದೆ ಎಂದು ಟಾಂಗ್ ನೀಡಿದರು.
ಜನಕ್ಕೆ ಏನು ಮಾಡುವುದಕ್ಕೆ ಆಗುತ್ತೋ ಅದನ್ನ ಮಾಡುವುದಕ್ಕೆ ಯೋಚನೆ ಮಾಡುತ್ತೇನೆ. ಸುಮಲತಾ ಏನು ಮಾಡ್ತಿದ್ದಾರೆ ಎಂದು ನನ್ನ ಜಿಲ್ಲೆಯ ಸ್ವಾಭಿಮಾನ ಜನಕ್ಕೆ ಗೊತ್ತಿದೆ. ಆದ್ರೆ, ಸ್ವಾಭಿಮಾನ ಇಲ್ಲದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಜಿಲ್ಲೆಯ ದಳಪತಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದರು.