ಮಂಡ್ಯ: ರೆಸಾರ್ಟ್‌ನಿಂದ ಓಡಿ ಬಂದಿಲ್ಲ, ಕುಮಾರಸ್ವಾಮಿ ಅನುಮತಿ ತೆಗೆದುಕೊಂಡು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ಮಳವಳ್ಳಿ ಶಾಸಕ ಅನ್ನದಾನಿ ಅವರು ಮಳವಳ್ಳಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು. ನಾನು ಕಲ್ಲುಬಂಡೆಯಂತೆ ಇದ್ದೇನೆ, ಕರಗುವುದಿಲ್ಲ.ಸರ್ಕಾರ ಉಳಿದುಕೊಳ್ಳುವ ವಿಶ್ವಾಸವಿದೆ. ಆಸ್ತಿ, ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿಲ್ಲ. ಸಿದ್ದಾಂತದಿಂದ ಬಂದಿದ್ದೇನೆ ಎಂದರು.
ಮಹಾರಾಷ್ಟ್ರದ ಮುಂಬೈನಲ್ಲಿ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆ. ಅವರನ್ನು ಬಿಟ್ಟುಬಿಡಿ, ಅವರು ಓಟು ಮಾಡಲು ಅವಕಾಶ ನೀಡಿ. ನಿಮ್ಮ ಪರವೇ ಮತ ಹಾಕಿಸಿಕೊಳ್ಳಿ ಎಂದು ಬಿಜೆಪಿ ನಾಯಕರನ್ನು ಅನ್ನದಾನಿ ಒತ್ತಾಯಿಸಿದರು.
ಬಿಜೆಪಿಯವರು ಶಾಸಕರನ್ನು ಬಂಧನದಲ್ಲಿಟ್ಟಿರುವುದು ಸತ್ಯ. ಮಾಧ್ಯಮದಲ್ಲಿ ಹೇಳಿರುವುದು ಸುಳ್ಳು ಹೇಳಿಕೆ. ಮುಂಬೈನಲ್ಲಿರುವ ಶಾಸಕರು ನಮ್ಮ ಪರವಾಗಿದ್ದಾರೆ. ಶಾಸಕರೆಲ್ಲಾ ಒತ್ತಡದಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಪತಿ ಆಡಳಿತ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವೀಕರ್ ತೀರ್ಮಾನವೇ ಅಂತಿಮ ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಶಾಸಕರು ಜಾನಪದ ಗೀತೆ ಹಾಡಿ ನೆರೆದಿದ್ದವರನ್ನು ರಂಜಿಸಿದರು.