ಮಂಡ್ಯ:ಸುಮಲತಾ ಅವರು ಮೈಸೂರಿನ ಯಾವ ಹೋಟೆಲ್‌ನಲ್ಲಿ ಇರ್ತಾರೆ, ಯಾರ್ ಯಾರು ಬರ್ತಾರೆ, ಯಾರ್ ಯಾರು ದುಡ್ಡು ಕೊಡ್ತಾರೆ ಎಲ್ಲವೂ ನನಗೆ ಗೊತ್ತಿದೆ, ಎನ್ನುವ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತಿನ ಭರಾಟೆಯಲ್ಲಿ ಸುಮಲತಾ ಅವರ ಫೋನ್ ಕದ್ದಾಲಿಕೆ ಮಾಡುತ್ತಿರುವುದನ್ನು ಒಪ್ಪಿಕೊಂಡ್ರಾ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಅಷ್ಟೇಅಲ್ಲದೇ ನಮ್ಮ ಸರ್ಕಾರ ಯಾವುದೇ ಫೋನ್ ಕದ್ದಾಲಿಕೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ವಿಶೇಷ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ಸುಮಲತಾ ಭದ್ರತೆ ವಿಚಾರವಾಗಿ ಮಾತನಾಡಿದ ಸಿಎಂ, ಸೆಂಟ್ರಲ್ ಟೀಮ್ ಅಲ್ಲ, BSF ಇಲ್ಲವೇ ಕಮಾಂಡೋ ಕರೆಸಿ ಭದ್ರತೆ ಕೊಡಲಿ. ನಾನೇ ಶಿಫಾರಸ್ಸು ಮಾಡುವೆ ಎಂದರು. ನಾನು ಬೇಹುಗಾರಿಕೆ ಅಧಿಕಾರಿಗಳ ಸಭೆ ಮಾಡಿಲ್ಲ. ಕಳೆದ ರಾತ್ರಿ ಪಳನಿಯಲ್ಲಿ ಇದ್ದೆ ಅಂತಾ ತಮ್ಮ ಮೇಲಿನ ದೂರಿಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್‌ನ ಮಾಜಿ ಸಂಸದ ಜಿ. ಮಾದೇಗೌಡ ಮನೆಗೆ ಭೇಟಿ ನೀಡಿ ರಹಸ್ಯ ಮಾತುಕತೆ ನಡೆಸಿದ ಸಿಎಂ ಕುಮಾರಸ್ವಾಮಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಸುಮಲತಾ ಮಾತಿಗೆ ತಿರುಗೇಟು ನೀಡುವಾಗ ಹೀಗೆ ಹೇಳಿದರು. ಕೆ.ಆರ್.ಪೇಟೆಯ ಕಾರ್ಯಕ್ರಮ ಆಯೋಜನೆಗೆ ದುಡ್ಡು ಎಲ್ಲಿಂದ ಬಂದಿತು. ಬೆವರು ಸುರಿಸಿ ಸಂಪಾದನೆ ಮಾಡಿದ ದುಡ್ಡಾ ಎಂದು ಪ್ರಶ್ನೆ ಮಾಡಿದ ಅವರು, ನಾನು ಎಲ್ಲೂ ಕಳ್ಳ ಜೋಡಿ ಎತ್ತು ಎಂದು ಹೇಳಿಲ್ಲ. ರಾತ್ರಿ ವೇಳೆ ಬಂದು ತಿನ್ನುವ ಜೋಡಿ ಎತ್ತುಗಳು ಎಂದು ಹೇಳಿದ್ದು ಎಂದು ಸಮಜಾಯಿಷಿ ನೀಡಿದರು.
ನಿನ್ನೆಯ ಅವರ ಭಾಷಣ ನೋಡಿದೆ. ಅವರಲ್ಲಿ ಯಾವುದೇ ನೋವಿನ ಛಾಯೆಯೂ ಕಾಣಲಿಲ್ಲ. ಅವರ ನಾಟಕೀಯ ಸಿನಿಮಾ ಡೈಲಾಗ್ ನೋಡಿದೆ. ಏನ್ ಕೊಡ್ತಾರೆ ನಿಮಗೆ, ಏನ್ ಕೊಡ್ತಾರೆ ನಿಮ್ಗೆ ಅಂತ ಆ್ಯಕ್ಷನ್ ಮಾಡ್ತಾರೆ. ಹಣ ತೆಗೆದುಕೊಂಡು ನನಗೆ ಓಟ್ ಹಾಕಿ ಅಂತಾರೆ. ಅದು ತಾಯಿ ಹೃದಯಾನಾ ಎಂದು ಪ್ರಶ್ನೆ ಮಾಡಿದರು.ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಅವರು ಮಜಾ ಮಾಡೋಕೆ ನಾನು ಹಣ ಕೊಡಲಿಲ್ಲ. ಸಂಕಷ್ಟಕ್ಕೆ ಕೊಟ್ಟಿದ್ದು. ಇವರು ಇನ್ನೊಬ್ಬರ ಹಣದಿಂದ ಮಜಾ ಮಾಡುವವರು ಎಂದು ಆಕ್ರೋಶ ವ್ಯಕ್ತಪಡಿಸಿದರು.