ಮಂಡ್ಯ: ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ನಮ್ಮ ಸಮ್ಮಿಶ್ರ ಸರ್ಕಾರದ ಅವಧಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಸಚಿವ ಪುಟ್ಟರಾಜು ಹೇಳಿದ್ದಾರೆ.
ಇಂದು ನಗರದಲ್ಲಿ ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಉರುಳುವ ಕಾರಣದಿಂದ ನಾನು ಸ್ವಲ್ಪ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸ್ವಾರ್ಥಿಯಾದೆ. ನಮ್ಮ ಸರ್ಕಾರ ಉರುಳಿದ್ದ ಬಗ್ಗೆ ನಿಮ್ಮ ಮೇಲೆ ನಮಗೇನು ಬೇಸರವಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ನಾನು ಸಚಿವನಾಗಿದ್ದಾಗ ಎಲ್ಲರೂ ಗಲಾಟೆ ಮಾಡಿದರು. ಪುಟ್ಟರಾಜು ಎಲ್ಲಾ ಕೆಲಸವನ್ನು ಅವರ ಕ್ಷೇತ್ರಕ್ಕೆ ಮಾಡಿಸಿಕೊಂಡರು ಎಂದಿದ್ದರು. ಈ ಸರ್ಕಾರ ಎಷ್ಟು ದಿನ ಇರುತ್ತೋ ಇರಲ್ವೋ ಎಂಬುದರ ಕುರಿತು ಬಹುತೇಕ ನನಗೆ ಗೊತ್ತಿತ್ತು. ಆ ಕಾರಣದಿಂದ ಸ್ವಲ್ಪ ಸ್ವಾರ್ಥದ ಕೆಲಸಗಳನ್ನು ನಾವು ಜಾಸ್ತಿ ಮಾಡಿಸಿಕೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಸಚಿವ ಸ್ಥಾನದ ಮೂಲಕ ನನ್ನ ಕ್ಷೇತ್ರದಲ್ಲಿ ನೀರಾವರಿಯನ್ನು ಅಭಿವೃದ್ಧಿ ಮಾಡಿದ್ದೇನೆ. ಆದರೆ ಈಗ ನಾರಾಯಣಗೌಡರು ಇನ್ನೂ ಮೂರುವರೆ ವರ್ಷ ನೀವು ಮಂತ್ರಿಯಾಗಿ ಇರುತ್ತೀರಾ. ನಿಮ್ಮ ಕ್ಷೇತ್ರಕ್ಕೆ ಏನು ಬೇಕೋ ಎಲ್ಲವನ್ನೂ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಓದಿ: ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಒತ್ತಾಯ: ಶಿಕ್ಷಣ ಸಚಿವರ ವಿರುದ್ಧ ಪೋಷಕರ ಆಕ್ರೋಶ
ನಮ್ಮನ್ನು ಕಿತ್ತಾಕಿದ್ದೀರಾ ಅಂತಾ ನಮಗೆ ಕೋಪನು ಇಲ್ಲ, ಬೇಸರನೂ ಇಲ್ಲ. ರಾಜಕೀಯ ಚದುರಂಗದಾಟದಲ್ಲಿ ಮೇಲೆ ಇದ್ದವರು ಕೆಳಗೆ ಬರುತ್ತಾರೆ. ಕೆಳಗೆ ಇದ್ದವರು ಮೇಲೆ ಬರುತ್ತಾರೆ. ಈಗ ನೀವು ಮೇಲೆ ಇದ್ದೀರಿ ಅಭಿವೃದ್ಧಿ ಕೆಲಸ ಮಾಡಿ ಎಂದರು.
ನಮ್ಮ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕೆಲಸದ ಉದ್ಘಾಟನೆಯನ್ನು ಸಚಿವ ನಾರಾಯಣಗೌಡರೇ ಮಾಡಬೇಕು. ಬಿಜೆಪಿ ಬಂದ ಮೇಲೆ ಅಭಿವೃದ್ಧಿ ಕೆಲಸವನ್ನು ಸ್ಟೇ ಮಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನನ್ನ ಕ್ಷೇತ್ರದಲ್ಲಿ ಕೆಲಸವನ್ನು ನಿಲ್ಲಿಸಿಲ್ಲ. ಮುಂದಿನ ದಿನಗಳಲ್ಲಿ ನಾರಾಯಣಗೌಡರನ್ನು ಹಾಗೂ ಸಿಎಂ ಯಡಿಯೂರಪ್ಪ ಅವರನ್ನು ಕರೆದು ದೊಡ್ಡ ಮಟ್ಟದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಪುಟ್ಟರಾಜು ಹೇಳಿದ್ರು.