ಮಂಡ್ಯ: ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿಯೇ ಪತ್ನಿಯನ್ನು ಪತಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಟಿ.ಬಿ. ಬಡಾವಣೆಯ ಮುಳಕಟ್ಟೆ ರಸ್ತೆಯಲ್ಲಿರುವ ಮನೆಯಲ್ಲಿ ಮಧುಶ್ರೀ (25) ಅವರನ್ನು ಬಲವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ. ಪತ್ನಿಯ ಶೀಲ ಶಂಕಿಸಿ ಪತಿ ಮಂಜುನಾಥ್ ಎಂಬುವವನೇ ಈ ಕೃತ್ಯ ಎಸಗಿ ಮಗನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಕರಡಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಧುಶ್ರೀ ಅವರಿಗೆ ಐದು ವರ್ಷಗಳ ಹಿಂದೆ ಮದುವೆ ನಡೆದಿತ್ತು. ಇವರಿಗೆ ನಾಲ್ಕು ವರ್ಷದ ಮಗನಿದ್ದು, ಮಂಜುನಾಥ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ದಂಪತಿ ನಾಗಮಂಗಲ ಪಟ್ಟಣದ ಟಿ.ಬಿ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಪತಿ ವಾರಕ್ಕೆ ಒಮ್ಮೆ ಮನೆಗೆ ಬಂದು ಹೋಗುತ್ತಿದ್ದನು. ಇತ್ತೀಚಿಗೆ ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಆಗಾಗ್ಗೆ ಇಬ್ಬರ ಮಧ್ಯೆ ಜಗಳ ನಡೆಯುತ್ತಲೇ ಇತ್ತು.
ಸ್ವಾತಂತ್ರ್ಯೋತ್ಸವ ದಿನವಾದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಮಂಜುನಾಥ್ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ದಂಪತಿ ನಡುವೆ ಮತ್ತೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಮಂಜುನಾಥ್ ಪತ್ನಿಯ ಹೊಟ್ಟೆ ಭಾಗಕ್ಕೆ ಬಲವಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಹತ್ಯೆ ಮಾಡಿದ ಮೇಲೆ ಭಯಗೊಂಡ ಆತ ಮಗ ಮನ್ವಿತ್ ನನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಬುಧವಾರ ಬೆಳಗ್ಗೆ ಮಧು ಎಂಬಾತ ಮನೆ ಬಳಿ ಹೋದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.