ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿರುವ ಮನೆಯ ಬೀಗ ಒಡೆದು ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಗ್ರಾಮದ ಲೋಲಾಕ್ಷಿ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವರ: ಲೋಲಾಕ್ಷಿ ನಿನ್ನೆ ಸಂಜೆ ಮದ್ದೂರು ಪಟ್ಟಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿದ್ದಾರೆ. ಬೀರುವಿನಲ್ಲಿದ್ದ ಅರ್ಧ ಕೆ.ಜಿ ಚಿನ್ನ ಹಾಗೂ ಒಂದು ಕೆ.ಜಿ ಬೆಳ್ಳಿ ಸೇರಿದಂತೆ ಅಂದಾಜು 40 ಲಕ್ಷ ರೂಪಾಯಿ ಬೆಲೆಬಾಳುವ ಸಾಮಗ್ರಿ ಹೊತ್ತೊಯ್ದಿದ್ದಾರೆ. ಈ ಮನೆಯಲ್ಲಿ ಲೋಲಾಕ್ಷಿ ಒಬ್ಬರೇ ವಾಸವಿದ್ದರಂತೆ. ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪವಿರುವ ಈ ಮನೆಯಲ್ಲಿ ಕಳ್ಳತನ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.