ಮಂಡ್ಯ: 'ಉಗ್ರವಾಗಿ ಮಾತಾಡೋ ಉಗ್ರಪ್ಪ ಕಂಪ್ಲೇಂಟ್ ಕೊಡಲಿ' ಎಂದು ಜಿಲ್ಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಮಂಡ್ಯದ ಡಿಎಆರ್ ಆಡಳಿತ ಕಚೇರಿ, ಶಸ್ತ್ರಾಗಾರ, ಶ್ವಾನದಳ ಕಟ್ಟಡ, ಸೆಂಟ್ರಲ್ ಪೊಲೀಸ್ ಠಾಣೆ ಕಟ್ಟಡ, 36 ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಿಸು ಮಾತಾಡೋದನ್ನ ಕಟ್ಟಿಕೊಳ್ಳೋಕೆ ಬರಲ್ಲ. ನಿರ್ದಿಷ್ಟವಾಗಿ ಕಂಪ್ಲೇಂಟ್ ಕೊಟ್ಟರೆ, ನಮ್ಮ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದ ಅವರು, ಗಟ್ಟಿ ಧ್ವನಿಯಲ್ಲಿ ಮಾತಾಡೋ ಉಗ್ರಪ್ಪ ಕಂಪ್ಲೇಂಟ್ ಕೊಟ್ಟರೆ ಏನಾಗುತ್ತೆ? ಎಂದು ಪ್ರಶ್ನೆ ಮಾಡಿದರು.
ಉಗ್ರಪ್ಪ ಕಂಪ್ಲೇಂಟ್ ಕೊಡ್ಲಿ:ಉಗ್ರಪ್ಪರ ಕಂಪ್ಲೇಂಟ್ನಿಂದ ಇನ್ನಷ್ಟು ಬಲ ಬರುತ್ತೆ. ಬಲ ಬರೋ ದೃಷ್ಟಿಯಿಂದ ಕಂಪ್ಲೇಂಟ್ ಕೊಡೋದು ಒಳ್ಳೆಯದು. ಸದಾ ಉಗ್ರವಾಗಿ ಮಾತಾಡೋರು ಉಗ್ರಪ್ಪ. ಈಗ ಪಿಸು ಮಾತಾಡೋದ್ರಲ್ಲಿ ಅರ್ಥವಿಲ್ಲ ಎಂದ ಅವರು, ಭ್ರಷ್ಟಾಚಾರದ ವಿರುದ್ಧ ನಿಜವಾಗಿಯೂ ಹೋರಾಟ ಮಾಡಲಿ ಅಂತಾ ಆಶಿಸುತ್ತೇನೆ ಎಂದರು.
ಮಂಡ್ಯದಲ್ಲಿ ಕ್ರೈಂ ರೇಟ್ ತೀರ ಜಾಸ್ತಿ ಆಗ್ತಿಲ್ಲ: ಮಂಡ್ಯದಲ್ಲಿ ಕ್ರೈಂ ರೇಟ್ ತೀರ ಜಾಸ್ತಿ ಆಗ್ತಿಲ್ಲ. ನನ್ನ ಹತ್ತಿರ ಅಂಕಿ - ಅಂಶ ಇದೆ. ಅದನ್ನ ಧಮನ ಮಾಡುವಂತಹ ಎಲ್ಲ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.
ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣವನ್ನ ಕೇವಲ 80 ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ರು
ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನೋಡಿದ್ರಲ್ಲ. ಕೇವಲ 80 ಗಂಟೆಗಳಲ್ಲಿ ಹೆಡೆಮುರಿ ಕಟ್ಟಿ ತಂದ್ರು. ಈ ರೀತಿ ಪೊಲೀಸರು ತನ್ನ ಕಾರ್ಯಾಚರಣೆ ಚೆನ್ನಾಗಿ ಮಾಡ್ತಿದ್ದಾರೆ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಲೋಪ ಇರಬಹುದು. ಬೆರಳೆಣಿಕೆಯಷ್ಟು ಲೋಪ ಕಂಡುಬಂದರೆ ಸ್ವಲ್ಪ ಕ್ಷಮೆ ಕೊಡಬೇಕಾಗುತ್ತೆ ಎಂದ ಅವರು, ಪೊಲೀಸರ ಒಳ್ಳೆಯ ಕೆಲಸದಿಂದ ನಾವು ನೆಮ್ಮದಿಯಾಗಿದ್ದೇವೆ ಎಂದು ತಿಳಿಸಿದರು.