ಮಂಡ್ಯ:ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಶ್ರೀರಂಗಪಟ್ಟಣ ಚಲೋ ಜಾಥಾಗೆ ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಬನ್ನಿಮಂಟಪದಲ್ಲಿ ಸಂಘಟನೆಗಳ ಕಾರ್ಯಕರ್ತರು ಭಜನೆ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ವಿವಾದ ಭುಗಿಲೆದ್ದಿದ್ದು, ಶನಿವಾರ ಬೆಳಗ್ಗೆಯೇ ನೂರಾರು ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಟ್ಟಣದಾದ್ಯಂತ ಜೂ.5ರ ಮುಂಜಾನೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಮೆರವಣಿಗೆ ಕೈಬಿಟ್ಟ ಸಂಘಟನೆಯವರು ಬನ್ನಿಮಂಟಪದ ಬಳಿ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದಾರೆ. ಇಡೀ ಬನ್ನಿಮಂಟಪ ಕೇಸರಿಮಯವಾಗಿದ್ದು, ಜೈ ಶ್ರೀರಾಮ್ ಘೋಷಣೆ ಕೂಗಲಾಗುತ್ತಿದೆ.