ಮಂಡ್ಯ :ಕಳೆದ ಒಂದು ವಾರಗಳಿಂದ ಮಳೆಯಾಗದ ಹಿನ್ನೆಲೆ ಜನರು ನಿಟ್ಟುಸಿರು ಬಿಟ್ಟಿದ್ರು. ಆದ್ರೆ, ರಾತ್ರಿ ಮತ್ತೆ ಮಂಡ್ಯದಲ್ಲಿ ಭಾರಿ ಮಳೆಯಾಗಿದೆ. ನಗರದ ರಸ್ತೆಗಳು ಕೆರೆಯಂತಾಗಿವೆ.
ಮಂಡ್ಯದ ಮಹಾವೀರ ಸರ್ಕಲ್‌ನಲ್ಲಿ ನೀರು ನಿಂತು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಂಡಿಯುದ್ದ ನಿಂತ ನೀರಲ್ಲೇ ವಾಹನ ಸವಾರರು ಪ್ರಯಾಣಿಸಿದರು.
ಭಾರಿ ಮಳೆಯಿಂದ ಕೆರೆಯಂತಾದ ರಸ್ತೆ, ಧರೆಗುರುಳಿದ ಮನೆಗಳು.. ಧಾರಾಕಾರ ಮಳೆಯಿಂದ ಕೆಆರ್‌ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಮನೆಗಳು ಧರೆಗುರುಳಿವೆ. ಗ್ರಾಮದ ಕಾಳೇಗೌಡ ಎಂಬುವರಿಗೆ ಸೇರಿದ ಮನೆ ನೆಲಕ್ಕುರುಳಿದೆ. ಈ ಮನೆಯನ್ನು ಮೇಕೆ, ಎಮ್ಮೆ, ಆಕಳು ಕಟ್ಟಲು ಬಳಸುತ್ತಿದ್ದರು.
ಮನೆ ಬಿದ್ದ ಪರಿಣಾಮ ಒಂದು ಎಮ್ಮೆ ಸಾವನ್ನಪ್ಪಿದೆ. ನಾಲ್ಕೈದು ಮೇಕೆಗಳಿಗೆ ಗಾಯವಾಗಿದೆ. ಮನೆ ಹಾಗೂ ಜಾನುವಾರು ಕಳೆದುಕೊಂಡು ರೈತ ಕಾಳೇಗೌಡ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕಳೆದ ಒಂದು ವಾರಗಳ ಕಾಲ ಬಿಡುವು ನೀಡಿದ್ದ ಮಳೆಯಿಂದ ಜನರು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದ್ರು. ಆದರೆ, ಮತ್ತೆ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದು, ಜನರು ಕಂಗಾಲಾಗಿದ್ದಾರೆ.