ಮಂಡ್ಯ: ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಹಾನಿಯಾಗಿವೆ. ನಾಗಮಂಗಲ ತಾಲೂಕಿನ ಗದ್ದೆ ಭುವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಸರ್ಕಾರಿ ಶಾಲೆ ಹಾಗೂ ಗ್ರಾಮದ ಹಲೆವೆಡೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕೆ ಆರ್ ಪೇಟೆ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೊಳ್ಳೆಪುರ ಕಿಕ್ಕೇರಿ ಗ್ರಾಮದ ಕೆರೆ ತುಂಬಿ ಹರಿಯುತ್ತಿದ್ದು, ಎರಡೂ ಗ್ರಾಮಕ್ಕೂ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಕೆ ಆರ್ ಪೇಟೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶ್ರೀರಂಗಪಟ್ಟಣದ ಚಂದ್ರಗಿರಿ, ಕೊಪ್ಪಲ್, ಸಬ್ಬನಕುಪ್ಪೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ರಸ್ತೆಯನ್ನೇ ಕೊರೆದು ನೀರು ಜಮೀನುಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ.