ಮಂಡ್ಯ:ಕಳೆದ ವರ್ಷ ಮೇ ಅಂತ್ಯದಲ್ಲೇ ರಾಜ್ಯವನ್ನು ಪ್ರವೇಶಿಸಿತ್ತು. ಈ ವರ್ಷ ಮುಂಗಾರು ತಡವಾಗಿ ಆಗಮಿಸುತ್ತಿದೆ. ಜೂನ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಹತ್ತು ದಿನಗಳ ಕಾಲ ತಡವಾಗಿ ರಾಜ್ಯಕ್ಕೆ ಕಾಲಿಟ್ಟಿದೆ. ಮಂಡ್ಯದ ಕೆಲವು ತಾಲೂಕುಗಳಲ್ಲಿ ನಿನ್ನೆ ಅಪಾರ ಪ್ರಮಾಣದ ಮಳೆಯಾಗಿದೆ. ತಡವಾಗಿ ಆದರೂ ನಿನ್ನೆ ಧಾರಾಕಾರವಾದ ಮಳೆ ಸುರಿದ ಪರಿಣಾಮ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಇದರಿಂದ ಜನ ತೊಂದರೆಗೆ ಒಳಗಾಗಿದ್ದಾರೆ.
ವರುಣನಾರ್ಭಟಕ್ಕೆ ಮದ್ದೂರು ತತ್ತರ:ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ನಿರಂತರವಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಮಳೆಗೆ ನಗರಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ. ಭಾರಿ - ಗಾಳಿ ಮಳೆಗೆ ಅವಾಂತರಗಳು ಕೂಡಾ ಸೃಷ್ಟಿಯಾಗಿವೆ.
ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಪರಿಣಾಮ ನಗರಕೆರೆ, ಸೋಂಪುರ, ಮಾಲಗಾರನಹಳ್ಳಿ, ಅಜ್ಜಹಳ್ಳಿ, ಕ್ಯಾತಘಟ್ಟ, ಹುಲಿಗೆರೆಪುರ ಸೇರಿದಂತೆ 9 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕರೆಂಟ್ ಇಲ್ಲದೇ ಇರುವುದರಿಂದ ಎಲ್ಲ 9 ಗ್ರಾಮಗಳು ತೀವ್ರ ಅನಾನುಕೂಲವನ್ನು ಎದುರಿಸಬೇಕಾಯಿತು. ಮಳೆಯಿಂದಾಗಿ ಅಲ್ಲಲ್ಲಿ ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿದ್ದು ಕಂಡು ಬಂದಿದೆ.