ಕರ್ನಾಟಕ

karnataka

ETV Bharat / state

ಮದ್ದೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು; ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು

ನಿನ್ನೆ ಮಂಡ್ಯದಲ್ಲಿ ವರುಣನ ಅಬ್ಬರ ಜೋರಾಗಿತ್ತು.

rain
ಮಳೆ

By

Published : May 12, 2023, 8:27 AM IST

Updated : May 12, 2023, 9:04 AM IST

ಮಂಡ್ಯ:ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಬಿರುಗಾಳಿಸಹಿತ ಮಳೆ ಸುರಿಯಿತು. ಸಿಡಿಲು ಬಡಿದು ಇಬ್ಬರು ಮೃತಪಟ್ಟರು. ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಧು (34) ತಮ್ಮ ಪತ್ನಿಯನ್ನು ತವರು ಮನೆಗೆ ಬಿಟ್ಟು ಹಿಂದಿರುಗುವಾಗ ಮಾದರಹಳ್ಳಿ-ಹರಳಹಳ್ಳಿ ಗ್ರಾಮದ ಮಧ್ಯೆ ಮರದಡಿ ನಿಂತಿದ್ದರು. ಇದೇ ವೇಳೆ ಸಿಡಿಲು ಬಡಿದು ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮೃತ ಮಧು

ಸಿಡಿಲಿನ ಶಬ್ದಕೆ ಮಹಿಳೆ ಸಾವು: ಸಿಡಿಲಿನ ಆರ್ಭಟಕ್ಕೆ ಬೆದರಿದ ಮದ್ದೂರು ಪಟ್ಟಣದ ಶಿವಪುರ ನಿವಾಸಿ ಗೌರಮ್ಮ (60) ಮನೆಯಲ್ಲಿ ಕುಸಿದುಬಿದ್ದರು. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ರವಾನಿಸಿದ್ದಾರೆ. ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಕರೆಂಟ್​ ಕಂಬಗಳು ಧರಾಶಾಹಿ: ಮದ್ದೂರು ತಾಲೂಕಿನ ಮಾಲಗಾರನಹಳ್ಳಿ, ಕೆ.ಕೋಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆಗೆ ಕೆಲವು ಮನೆಗಳ ಮೇಲ್ಟಾವಣಿ ಹಾರಿ ಹೋಗಿದೆ. ಮನೆಗಳಲ್ಲಿದ್ದ ವಸ್ತುಗಳು ಹಾನಿಗೊಂಡಿವೆ. ವಿವಿಧೆಡೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮೀಪ ಬೃಹತ್ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು ಸರ್ವಿಸ್ ರಸ್ತೆಗೆ ಮರ ಉರುಳಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ವರುಣನ ಅಬ್ಬರಕ್ಕೆ ಜಲಾವೃತಗೊಂಡ ರಸ್ತೆ ಮತ್ತು ಹಾನಿಗೊಳಗಾದ ವಿದ್ಯುತ್​ ಲೈನ್​ಗಳು

ರಾಷ್ಟ್ರೀಯ ಹೆದ್ದಾರಿಯ ಮೇಲು ಸೇತುವೆ ಮೇಲಿಂದ ಮಳೆ ನೀರು ಸರ್ವಿಸ್ ರಸ್ತೆಗೆ ಹರಿದು ಬಂದಿದ್ದು ಅಪಾರ ಪ್ರಮಾಣದ ನೀರು ದ್ವಿಚಕ್ರ ವಾಹನ ಸವಾರರ ಮೇಲೆ ಸುರಿದಿದೆ. ಮದ್ದೂರು ಪಟ್ಟಣ ವ್ಯಾಪ್ತಿಯ ವಿವಿಧೆಡೆ ಅಳವಡಿಸಿರುವ ಬೃಹತ್ ಜಾಹೀರಾತು ಫಲಕಗಳು ಬಿರುಗಾಳಿಗೆ ಸಿಲುಕಿ ತೂರಿ ಹೋಗಿವೆ. ಶಿವಪುರದ ಕುಂಬಾರು ಬೀದಿಯಲ್ಲಿ ಒಳಚರಂಡಿಯ ನೀರು ಉಕ್ಕಿ ಹರಿದು ಮನೆ ಮುಂದೆ ನಿಂತಿತು. ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ.. ಅಲ್ಲಲ್ಲಿ ಹಾನಿ

Last Updated : May 12, 2023, 9:04 AM IST

ABOUT THE AUTHOR

...view details