ಮಂಡ್ಯ:ಕೆಲ ತಿಂಗಳ ಹಿಂದೆಯಷ್ಟೇ ತಾರಕಕ್ಕೇರಿದ್ದ ಅಕ್ರಮ ಗಣಿಗಾರಿಕೆ ವಿವಾದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶವಾದ ಬನ್ನಂಗಾಡಿ ಗ್ರಾಮದ ಸರ್ವೆ ನಂಬರ್ 24ರ ಗೋಮಾಳ ಪ್ರದೇಶದಲ್ಲಿ ಸ್ಫೋಟಕ ಪತ್ತೆಯಾಗಿದೆ.
ಮಂಡ್ಯದ ಬೇಬಿ ಬೆಟ್ಟದಲ್ಲಿ ಸ್ಫೋಟಕ ವಸ್ತು ಪತ್ತೆ - ಮಂಡ್ಯ ಸಂಸದೆ ಸುಮಲತಾ
ಬೇಬಿಬೆಟ್ಟದಲ್ಲಿ ಜಾನುವಾರು ಮೇಯಿಸುತ್ತಿದ್ದ ಸಂದರ್ಭದಲ್ಲಿ ರೈತರು ಸ್ಫೋಟಕ ವಸ್ತುಗಳನ್ನು ಗಮನಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಜಾನುವಾರು ಮೇಯಿಸುತ್ತಿದ್ದ ಸಂದರ್ಭದಲ್ಲಿ ರೈತರಿಗೆ ಸ್ಫೋಟಕ ವಸ್ತುಗಳು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದಲೂ ನಿಷ್ಕ್ರಿಯ ದಳ ಸ್ಪೋಟಕ ಪತ್ತೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ಕಾರ್ಯಾಚರಣೆ ವೇಳೆ ಪತ್ತೆಯಾಗದ ಸ್ಫೋಟಕಗಳು ನಂತರದ ದಿನಗಳಲ್ಲಿ ರೈತರ ಕಣ್ಣಿಗೆ ಬಿದ್ದಿರುವುದು ಕುತೂಹಲಕಾರಿಯಾಗಿದೆ. ಅಲ್ಲದೇ ಸಿಬ್ಬಂದಿ ಸರಿಯಾಗಿ ಶೋಧ ನಡೆಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಅವರು, ಬೇಬಿ ಬೆಟ್ಟದ ಕಲ್ಲುಗಣಿಗಾರಿಕೆಯಿಂದ ಕೆಆರ್ಎಸ್ಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರಲ್ಲದೇ ಬೇಬಿ ಬೆಟ್ಟದ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಗಣಿಗಾರಿಕೆ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಕೇಂದ್ರ ಸರ್ಕಾರಕ್ಕೂ ಕೆಆರ್‌ಎಸ್ ಅನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಇದೀಗ ಸ್ಪೋಟಕ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸ್ಫೋಟಕ ದೊರೆತಿರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.