ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ತಂದೆ, ಜೆಇಡೆಸ್ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಪರದೆ ಮೇಲೆ ನೋಡಿ ಕಣ್ಣೀರು ಹಾಕಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸಹ ಭಾಗಿಯಾಗಿದ್ದರು. ಹೆಚ್.ಡಿ. ದೇವೇಗೌಡರು ಮನೆಯಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುವ ವಿಡಿಯೋವನ್ನು ಪರದೆ ಮೇಲೆ ಪ್ರಸಾರ ಮಾಡಲಾಗಿತ್ತು. ದೇವೇಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಬಂದಿರಲಿಲ್ಲ. ಹೀಗಾಗಿ ತಂದೆಯ ಸ್ಥಿತಿ ಕಂಡು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಹೋದರ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನನಗೆ ಐದು ವರ್ಷದ ಆಡಳಿತವನ್ನು ಕೊಟ್ಟರೆ ಯಾವ ರೈತರು ಸಾಲಗಾರರಾಗದಂತೆ ಮಾಡುವ ಯೋಜನೆಗಳನ್ನು ನೀಡಲು ಯೋಚಿಸಿದ್ದೇನೆ. ಹಾಗೆ ಯಾವ ರೀತಿಯ ಯೋಜನೆಗಳನ್ನು ಕೊಡುತ್ತೇನೆ ಎನ್ನುವುದನ್ನು ಮನೆ ಮನೆಗೆ ಮಾಹಿತಿ ನೀಡುತ್ತೇನೆ. ನಮ್ಮ ನಾಡಿನ ಪ್ರತಿ ಕುಟುಂಬದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕಬೇಕು. ಹಳ್ಳಿಯಲ್ಲಿರುವ ಶಿಕ್ಷಣ ಹೊಂದಿರುವ ಹೆಣ್ಣುಮಕ್ಕಳ ಬಗ್ಗೆ ಯೋಜನೆಗಳ ಕುರಿತುನಿಮ್ಮ ಮುಂದೆ ಇಡುತ್ತೇನೆ ಎಂದು ಕಣ್ಣೀರು ಹಾಕಿಕೊಂಡೇ ಹೇಳಿದರು. ಮಂಡ್ಯದಲ್ಲಿ ಜೆಡಿಎಸ್ ಮುಗಿಸಿದ್ದೇವೆ ಎನ್ನುವಂತಹ ಹೇಳಿಕೆಯನ್ನು ಇದೇ ಪಕ್ಷದಿಂದ ಬೆಳೆದವರು ಹೇಳಿದ್ದಾರೆ. ಆದರೆ, ಈ ಜನ್ಮದಲ್ಲಿ ಇದನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪರದೆ ಮೇಲೆ ತಂದೆ ದೃಶ್ಯ ಬರುತ್ತಿದ್ದಂತೆ ಕಣ್ಣಿರು ಹಾಕಿದ ಹೆಚ್ಡಿಕೆ ಇದನ್ನೂ ಓದಿ: ಸರಣಿ ಹತ್ಯೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ಧಾಳಿ
ಎರಡು ರಾಷ್ಟ್ರೀಯ ಪಕ್ಷಗಳಿಂದ ದೇಶದ ಯುವಕರು ದಾರಿ ತಪ್ಪುತ್ತಿದ್ದಾರೆ. ಜೊತೆಗೆ ಅಹಿತಕರ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ. ಮಂಗಳೂರಿನಲ್ಲಿ ಸರಣಿ ಹತ್ಯೆಯಾಗ್ತಿವೆ. ಸಿಎಂ ಸ್ಥಳದಲ್ಲಿದ್ದಾಗಲೇ ಮತ್ತೊಂದು ಹತ್ಯೆಯಾಗುತ್ತೆ. ಒಂದು ವರ್ಗದ ಯುವಕನ ಮನೆಗೆ ಹೋಗಿ ಪರಿಹಾರ ಕೊಡ್ತಾರೆ. ನಾನು ಅಧಿಕಾರದಲ್ಲಿದ್ದಾಗ ಎಂದೂ ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದರು.
ಯಾರೋ ಒಬ್ಬ ಎಂಪಿ ಹೇಳ್ತಾನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕಲ್ಲು ಹೊಡೆಯಬಹುದಿತ್ತು. ಮತ್ತೊಬ್ಬ ಮಾಜಿ ಸಿಎಂ ಈ ಸರ್ಕಾರಕ್ಕೆ ಮೊಟ್ಟೆಯಲ್ಲಿ ಹೊಡೆಯಬೇಕು ಅಂತಾರೆ. ಹೀಗೆ ಎರಡೂ ರಾಷ್ಟ್ರೀಯ ಪಕ್ಷಗಳು ದ್ವೇಷದ ಭಾವನೆ ಧಾರೆ ಎರೆಯುತ್ತಿದ್ದಾರೆ. ಮಾಜಿ ಸಿಎಂ ಒಬ್ಬರು ಮಂಡ್ಯಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಏನು ಅಂತಾರೆ. ಅವರು ಆಡುವ ಮಾತಿಗೆ ನನ್ನ ರಕ್ತ ಕುದಿಯುತ್ತೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೂರಾರು ಜನ ಈ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡ್ರು ಆದ್ರೂ ಒಬ್ಬರ ಮನೆಗೂ ಹೋಗಿಲ್ಲ. ನನ್ನನ್ನು ಸಿಎಂ ಮಾಡಿದ್ದು ನಾವು ಅಂಥಾ ಹಲವರು ಹೇಳುತ್ತಾರೆ. ಆದರೆ ನಾನು ಸಿಎಂ ಆಗಿದ್ದು ನನ್ನ ತಂದೆ ತಾಯಿ ಆಶೀರ್ವಾದ ಹಾಗೂ ಜನರಿಂದ ಎಂದು ಆಕ್ರೋಶ ಹೊರಹಾಕಿದರು.
ದೇವೇಗೌಡರು ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ಇದೆ. ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ನಾನು ಅಳಬಾರದು ಅಂತಾ ಇದ್ದೆ, ಆದರೆ ನಮ್ಮದು ಕಟುಕ ಹೃದಯ ಅಲ್ಲ. ಇದು ನಾಟಕ ಅಲ್ಲ, ಅವರ ಪರಿಸ್ಥಿತಿ ಕಣ್ಣೀರು ತರುತ್ತದೆ. ಅವರು ಇರುವ ಸ್ಥಿತಿ ನೋಡಿದರೆ ನೋವಾಗುತ್ತದೆ ಎಂದು ಕಣ್ಣೀರು ಹಾಕಿದರು.
ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಬೈಕ್ ರ್ಯಾಲಿ ನಡೆಸಿ ಬಳಿಕ ಹೆಚ್ಡಿಕೆ ಅವರಿಗೆ ಕ್ರೇನ್ ಮೂಲಕ ಹೂವಿನ ಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಲಾಯಿತು.