ಶಿವಮೊಗ್ಗ/ಮಂಡ್ಯ :ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡಲೇ ಕರ್ನಾಟಕದ ಆರೂವರೆ ಕೋಟಿ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ನಗರದ ಶಿವಪ್ಪ ನಾಯಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಮಾತನಾಡಿದ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ನಟ ಅಂಬರೀಶ್ ಸಂಸದರಾಗಿದ್ದಾಗ ಕಾವೇರಿ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ಮಂತ್ರಿ ಸ್ಥಾನಕ್ಕೆ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ಕೋಟ್ಯಂತರ ಜನರ ಕಣ್ಮಣಿಯಾಗಿದ್ದ ಅವರು ನಿಧನರಾಗಿದ್ದಾಗ ಯಾವುದೇ ಸರ್ಕಾರ ಅಥವಾ ಯಾವುದೇ ಮುಖ್ಯಮಂತ್ರಿ ಇರಲಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವುದು ಅವರ ಕರ್ತವ್ಯ. ಆದರೆ, ಕುಮಾರಸ್ವಾಮಿ ಅವರು ನಾನೇ ಅವರ ಅಂತ್ಯಸಂಸ್ಕಾರ ಮಾಡಿದೆ ಎನ್ನುವ ರೀತಿಯಲ್ಲಿ ಬಿಂಬಿಸಲು ಹೊರಟಿರುವ ಅವರ ನಡೆ ಸರಿಯಲ್ಲ ಎಂದರು.
ಕೆಆರ್ಎಸ್ ಡ್ಯಾಂ ಸುರಕ್ಷತಾ ದೃಷ್ಠಿಯಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅವರು ನೀಡಿದ ಹೇಳಿಕೆಗೆ ಅನವಶ್ಯಕ ಪ್ರತಿ ಹೇಳಿಕೆಗಳನ್ನು ನೀಡುವುದು ಮತ್ತು ರೌಡಿಗಳನ್ನು ಎತ್ತಿಕಟ್ಟುವುದು ಮಾಡುತ್ತಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಕುಮಾರಸ್ವಾಮಿ ಅವರು ಸುಮಲತಾ ಅವರಲ್ಲಿ ಕ್ಷಮೆಯಾಚಿಸಬೇಕು. ಹಾಗೂ ರಾಜ್ಯದ ಜನರ ಬಳಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೆಚ್ಡಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.