ಕರ್ನಾಟಕ

karnataka

ETV Bharat / state

ಚುನಾವಣೆ ಆದ ಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತ ಜನ ಹೇಳುತ್ತಾರೆ: ಹೆಚ್​ ಡಿ ಕುಮಾರಸ್ವಾಮಿ - etv bharat kannada

ಬಿಜೆಪಿಯವರಿಗೆ ಏನು ಕೆಲಸ ಇಲ್ಲ. ಉರಿಗೌಡ, ನಂಜೇಗೌಡ ಕಥೆ ಇಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

HD Kumaraswamy reaction on bjp
ಚುನಾವಣೆ ಆದ ಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತ ಜನ ಹೇಳುತ್ತಾರೆ: ಹೆಚ್​ ಡಿ ಕುಮಾರಸ್ವಾಮಿ

By

Published : Mar 19, 2023, 6:15 PM IST

ಚುನಾವಣೆ ಆದ ಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತ ಜನ ಹೇಳುತ್ತಾರೆ: ಹೆಚ್​ ಡಿ ಕುಮಾರಸ್ವಾಮಿ

ಮಂಡ್ಯ:ಉರಿಗೌಡ, ನಂಜೇಗೌಡ ಕಥೆ ಕಟ್ಟಿಕೊಂಡು ಇರ್ತೀರಾ. ಇಲ್ಲ ಹೊಲ ಉಳುವ ಬೋರೇಗೌಡನ ನೋಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದರು. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ. ಈ ವಿಚಾರ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ದ್ರಾಕ್ಷಿ ಬೆಳೆ ನಾಶ ಆಗಿದೆ. ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಕಟಾವ್​ ಮಾಡಿದ ಮೆಣಸಿನಕಾಯಿ ಮಳೆ ನೀರಿನಲ್ಲಿ ನೆಂದು ಕೊಳೆತು ಹೋಗಿದೆ. ಇದನ್ನ ನೋಡಬೇಕೊ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಸಸ್ಥ್ಯ ಕೊಡಬೇಕಾ? ಎಂದು ಪ್ರಶ್ನಿಸಿದರು.

ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ನೋಡಿ:ಈ ಬಗ್ಗೆ ಸಿನಿಮಾ ಯಾವನು ಮಾಡುತ್ತಾನೂ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಒರಿಜಿನಲ್ಲಾ?. ಅವರು ಕಾಲ್ಪನಿಕ ವಿಚಾರ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಈಗ ಸಿಕ್ಕಿರುವ ಪುಸ್ತಕದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್​ ವಿರುದ್ಧ ಉರಿಗೌಡ ಮತ್ತು ನಂಜೇಗೌಡ ಹೋರಾಟ ಮಾಡಿದ್ದರು ಎಂದು ಇದೆ ಅಷ್ಟೇ, ಯುದ್ಧ ಮಾಡಿ ತಲೆ ತೆಗೆದರು ಅಂತ ಇದೆಯಾ?. ಅದಕ್ಕೆ ಯಾಕೆ ಇಷ್ಟು ತಲೆಕೆಡಿಸಿಕೊಳ್ಳುತ್ತೀರಿ. ಹೊಲದಲ್ಲಿ ಸಾಯುತ್ತಿರುವ ಬೋರೇಗೌಡನನ್ನು ನೋಡಿ ನಂತರ ಉರಿಗೌಡ, ನಂಜೇಗೌಡರನ್ನು ಹುಡುಕೋಣ. ಮೊದಲು ಅಕಾಲಿಕ ಮಳೆ ಬಿದ್ದು ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ನೋಡಿ ಎಂದರು.

ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡೋದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ:ಜೆಡಿಎಸ್ ಪುಟ್ಕೋಸಿ ಪಕ್ಷ ಎಂಬ ನರೇಂದ್ರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಚುನಾವಣೆ ಆದ ಮೇಲೆ ಯಾವುದು ಪುಟ್ಕೋಸಿ ಪಕ್ಷ ಅಂತ ಜನ ಹೇಳುತ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸುತ್ತಾರೆ ಅನ್ನೋದು ಗೊತ್ತಾಗುತ್ತೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡೋದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕು ಎಂದು ಕ್ಲಿಯರ್ ಆಗಿಲ್ಲ. ಅಂತವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರಾ? ಮೊದಲು ಅವರ ಪುಟ್ಕೋಸಿ ಹೇಗಿದೆ ಅಂತ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ ವಿಚಾರವಾಗಿ ಮಾತನಾಡಿ ಅವರು, ಯಾವ ಪಕ್ಷ, ಯಾವಾಗ ಪಟ್ಟಿ ಬಿಡುಗಡೆ ಮಾಡ್ತಾರೋ, ಹೇಗೆ ಮಾಡ್ತಾರೋ ಗೊತ್ತಿಲ್ಲ. ಅದಕ್ಕು ನನಗೆ ಸಂಬಂಧ ಇಲ್ಲ. ಚುನಾವಣೆಯಲ್ಲಿ ಆಯಾಯ ಪಕ್ಷಗಳು ಹೋರಾಟ ಮಾಡಬೇಕು. ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು, ಘೋಷಣೆ ಮಾಡಬೇಕು ಅನ್ನೋ ಲೆಕ್ಕಾಚಾರ ಅವರು ಮಾಡಿಕೊಳ್ಳುತ್ತಾರೆ ಎಂದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನ ಸೆಳೆಯಲು ಜೆಡಿಎಸ್, ಬಿಜೆಪಿ ಪ್ರಯತ್ನ ಮಾಡುತ್ತಿವೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಅವರ‌ ನಾಯಕರನ್ನು ಸೆಳೆಯೋಕೆ ಜೆಡಿಎಸ್ ಏನು ಅಯಸ್ಕಾಂತನ. ನಾನು ಮ್ಯಾಗ್ನೇಟ್ ಅಲ್ಲ ಎಂದು ಹೇಳಿದರು.

ಇದನ್ನೂ ಓದಿ:ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲು ಪ್ರತಿಮೆಗಳ ಅನಾವರಣ.. ವಿವಿಧ ಸಮುದಾಯದ ಮತಬೇಟೆಗೆ ಬಿಜೆಪಿ ತಂತ್ರ

ABOUT THE AUTHOR

...view details