ಮಂಡ್ಯ :ಕಾಂಗ್ರೆಸ್ ದಲಿತ ಸಿಎಂ ರೇಸ್ ಕುರಿತು ಪ್ರತಿಕ್ರಿಯಿಸಿರು ಮಾಜಿ ಸಿಎಂ ಕುಮಾರಸ್ವಾಮಿ, ದಲಿತರು ಸಿಎಂ ಆಗೋದನ್ನು ನಾನು ತಪ್ಪಿಸಲಿಲ್ಲ. ದಲಿತರು ಸಿಎಂ ಆಗುವುದನ್ನು ತಪ್ಪಿಸಿದ್ದೇ ಈಗ ಮತ್ತೆ ಸಿಎಂ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರಲ್ಲ ಅವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು ಹೇಳದೆ ವ್ಯಂಗ್ಯವಾಡಿದ್ದಾರೆ.
ಯಾರೂ ಮಾಡದೇ ಇರೋ ಸಾಧನೆ ಮಾಡಿ, ನಾನಿದ್ದರೇ ಕಾಂಗ್ರೆಸ್ ಅಂತ ಹೇಳ್ತಾರಲ್ಲ. 130 ಸೀಟಿನಲ್ಲಿ ಮುಖ್ಯಮಂತ್ರಿಯಾಗಿ 78ಕ್ಕೆ ಬಂದರಲ್ಲ ಅವರು ದಲಿತ ಸಿಎಂ ಆಗೋದನ್ನು ತಪ್ಪಿಸಿದ್ದು ಎಂದು ಮಾತಿನಲ್ಲೇ ಕುಟುಕಿದ್ದಾರೆ. ದಲಿತರನ್ನು ಸಿಎಂ ಮಾಡಬೇಕು ಎಂದು ಈವರೆಗೆ ಕಾಂಗ್ರೆಸ್ನವರಿಗೆ ಗೊತ್ತಿರಲಿಲ್ವ.? ಸ್ವಾತಂತ್ರ್ಯ ಬಂದ ಬಳಿಕ 60 ವರ್ಷ ರಾಜ್ಯ ಆಳಿದಾಗ ಗೊತ್ತಾಗಲಿಲ್ವ.? ಈಗ ದಲಿತರ ಹೆಸರು ಬರ್ತಿದ್ದೀಯಾ? ಎಂದು ಪ್ರಶ್ನಿಸಿದರು.
‘ಮನ್ಮುಲ್ ಸೂಪರ್‌ಸೀಡ್ ಬೇಡ’
ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ. ಆದ್ರೆ, ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡೋದು ಬೇಡ ಎಂದು ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ. ಹಗರಣ ಬಯಲಿಗೆಳೆದ ಆಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ ಎಂದು ಸಿಎಂಗೆ ಹೇಳಿದ್ದೇವೆ ಎಂದರು. ಇವರಿಗೆ ಮಾನ-ಮರ್ಯಾದೆ ಇದ್ರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ ಎಂದರು.