ಮಂಡ್ಯ :ಸಂಸದೆ ಸುಮಲತಾ ಅಂಬರೀಶ್ ಅವರು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅವರು ಮಹಾನ್ ನಾಯಕಿ. ದೇಶದಲ್ಲಿ ಇಂತಹ ನಾಯಕಿ ಹಿಂದೆ ಉದ್ಭವವಾಗಿರಲಿಲ್ಲ ಎಂದು ಟೀಕಿಸಿದರು. ಇಂದು ಶ್ರೀ ಕ್ಷೇತ್ರ ಆದಿ ಚುಂಚನಗಿರಿಗೆ ಭೇಟಿ ಕೊಟ್ಟು ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಅವರು ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರು. ಅವರ ಬಗ್ಗೆ ನಾವು ಮಾತನಾಡಲು ಆಗಲ್ಲ. ನಾವು ಚಿಕ್ಕವರು ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ಸಿಎಂ ಆದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇವೆ. ಲಾಟರಿ, ಸಾರಾಯಿ ಎಲ್ಲವನ್ನೂ ನಿಷೇಧ ಮಾಡಿದ್ದೇ ನಾನು. ಜನರು ಎಲ್ಲ ಮಾತಿಗೂ ತೀರ್ಪು ಕೊಡ್ತಾರೆ ಎಂದು ಹೇಳಿದರು.
ಚುಂಚನಗಿರಿ ಸಮಾಜದ ಧಾರ್ಮಿಕ ಕ್ಷೇತ್ರ. ನಮ್ಮ ಕುಟುಂಬಗಳ ರಕ್ಷಕ ಕಾಲಭೈರವನ ದರ್ಶನ ಪಡೆದಿದ್ದೇನೆ. ದೇವರ ಅನುಗ್ರಹ ಪಡೆಯಲು ಭೇಟಿ ಕೊಟ್ಟಿದ್ದೇನೆ. ಅಮಾವಾಸ್ಯೆ ದಿನ ಬರಲು ಆಗಿರಲಿಲ್ಲ. ಮತದಾನಕ್ಕಿಂತ ಮೊದಲು ಬರಬೇಕೆಂಬ ಅಪೇಕ್ಷೆ ಇತ್ತು. ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇಂದು ದರ್ಶನ ಪಡೆದು ದೇವರ ಅನುಗ್ರಹ, ಶಕ್ತಿ ಪಡೆಯಲು ವಿಶೇಷ ಪೂಜೆ ಸಲ್ಲಿಸಿದ್ದೇನೆ. ಮುಂದಿನ 10 ದಿನಗಳ ಕಾಲದ ಹೋರಾಟಕ್ಕೆ ಪ್ರಾರ್ಥನೆ ಮಾಡಿದ್ದೇನೆ. ನಾಡಿನ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಲು ಸ್ಪಷ್ಟ ಬಹುಮತ ಸರ್ಕಾರ ತರಲು ಕಾಲಭೈರವನ ಅನುಗ್ರಹ ಬೇಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಷ್ಟ್ರೀಯ ಪಕ್ಷ ವಿರುದ್ದ ವಾಗ್ದಾಳಿ: ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯಾದ್ಯಂತ ಮತಬೇಟೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಪ್ರಧಾನಿ ಮೋದಿ, ಗೃಹ ಸಚಿವರು, ರಕ್ಷಣಾ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಸೇರಿ ಹಲವು ಮಂತ್ರಿಗಳು ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಉತ್ತರ ಭಾರತದ ಹಲವು ಮುಖಂಡರು ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.