ಮೈಸೂರು: ನನ್ನ ಮಗ ಕದ್ದುಮುಚ್ಚಿ ಹೋಗಿ ಮುಖ್ಯಮಂತ್ರಿಯಾಗಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿರುಗೇಟು ನೀಡಿದ್ದಾರೆ.
ಕೆ.ಆರ್. ಪಟ್ಟಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಕುಮಾರಸ್ವಾಮಿ ಬಿಜೆಪಿ ಜೊತೆ ಕದ್ದುಮುಚ್ಚಿ ಹೋಗಿ ಸರ್ಕಾರ ರಚನೆ ಮಾಡಿದ್ದರು ಅಂತಾ ಕೃಷ್ಣ ಹೇಳ್ತಾರೆ. ಆದರೆ ನನ್ನ ಮಗ ಹೋಗಲು ಯಾರು ಕಾರಣ ಅಂತ ಜನರಿಗೆ ಗೊತ್ತು ಎಂದು ಕುಟುಕಿದರು.
ಮಂಡ್ಯದಲ್ಲಿ ನಿಖಿಲ್ ಕಥೆ ಮುಗೀತು, ದೇವೇಗೌಡರಿಗೆ ಮುಖಭಂಗ ಆಯ್ತು ಅಂತೆಲ್ಲ ಬಿಂಬಿಸುತ್ತಿದ್ದಾರೆ. ಅದು ಮಂಡ್ಯದಲ್ಲಿ ಆ ರೀತಿ ಆಗೋದುಂಟ? ಪ್ರಧಾನಿಯಾಗಿ, ರಾಜ್ಯದ ಸಿಎಂ ಆಗಿ ತುಂಬಾ ನೋವುಂಡಿದ್ದೇನೆ. ಮಂಡ್ಯ ಜನರ ಭಾವನೆ ನನಗೆ ಗೊತ್ತಿದೆ. ಮಂಡ್ಯ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ದೇವೇಗೌಡರು ಗುಡಗಿದರು.
ಎಸ್.ಎಂ.ಕೃಷ್ಣಗೆ ಹೆಚ್.ಡಿ.ದೇವೇಗೌಡ ಟಾಂಗ್ ದೇಶದಲ್ಲಿ ಎಲ್ಲಿ ನೋಡಿದರು ಮೋದಿ, ಶಾ, ಅಂತಾರೆ,. ಈ ಭಾರತಾಂಬೆ ನಿಮ್ಮನ್ನು ಎದುರಿಸುವ ವ್ಯಕ್ತಿಯನ್ನು ಹುಟ್ಟಿಸಿದ್ದಾಳೆ. ಮೋದಿ ೬ ಸಾವಿರ ರೈತರ ಖಾತೆಗೆ ಕೊಡ್ತೀವಿ ಅಂತಾರೆ, ಚುನಾವಣೆ ಮುಗಿದ ಮೇಲೆ ಇದು ಎಲ್ಲಿಗೆ ತಲುಪುತ್ತೆ ನೋಡೋಣವೆಂದು ಸವಾಲು ಹಾಕಿದರು. ಬೋಗಿಬೆಲ್ ಸೇತುವೆಗೆ ನಾನು ಅಡಿಪಾಯ ಹಾಕಿ ಕಟ್ಟಿಸಿದ್ದೆ. ಆದರೀಗ ಉದ್ಘಾಟನೆ ಮಾಡಿ ತಾವೇ ಕಟ್ಟಿಸಿದ್ದೇವೆ ಎಂದು ಮೋದಿ ಹೇಳಿಕೊಳ್ಳುತ್ತಾರೆ ಎಂದು ದೇವೇಗೌಡರು ವಾಗ್ದಾಳಿ ನಡೆಸಿದ್ರು.
ಸಿನೆಮಾ ನಟರಿಗೆ ಆಕರ್ಷಿಸುವ ಶಕ್ತಿಯಿದೆ. ಕೈ ಮುಗಿಯುತ್ತೇನೆ ನಾನು ಯಾರನ್ನು ನಿಂದಿಸಲ್ಲ. ಡಾ.ರಾಜ್ ಕುಮಾರ್ ಅಂತಹ ಮೇರುವ್ಯಕ್ತಿತ್ವ ಯಾರಿಗೂ ಬರಲ್ಲ. ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವಂತೆ ರಾಜ್ಕುಮಾರ್ ಅವರನ್ನ ಕೇಳಿಕೊಂಡಿದ್ದೆ. ಆದ್ರೆ ಅವರು ಒಪ್ಪಿರಲಿಲ್ಲ. ಅವರ ವ್ಯಕ್ತಿತ್ವನೇ ಬೇರೆ, ಈಗಿನ ನಟರ ವ್ಯಕ್ತಿತ್ವನೇ ಬೇರೆ ಎಂದು ನಟರ ಹೆಸರೇಳದೆ ದೇವೇಗೌಡ ಚಾಟಿ ಬೀಸಿದರು.