ಮಂಡ್ಯ:ಶ್ರೀರಂಗಪಟ್ಟಣದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳಿಂದ ಬೃಹತ್ ಸಂಕೀರ್ತನಾ ಯಾತ್ರೆ ಇಂದು ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನದ ಬಳಿಯ ಆಂಜನೇಯ ಸ್ವಾಮಿ ದೇಗುಲದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡು, ಪಟ್ಟಣದ ಮುಖ್ಯ ದ್ವಾರದ ಮೂಲಕ ಪುರಸಭೆ ವೃತ್ತ ಸೇರಿದಂತೆ ಮುಖ್ಯ ರಸ್ತೆಯಲ್ಲಿನ ಮೂಡಲ ಬಾಗಿಲು ಆಂಜನೇಯ ದೇವಾಲಯದ ಮಾರ್ಗವಾಗಿ ತೆರಳಿ ಬಳಿಕ ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಅಂತ್ಯಗೊಳ್ಳಲಿದೆ.
ಗಂಜಾಂನ ನಿಮಿಷಾಂಬ ದೇವಾಲಯದ ಬಳಿಯ ಆಂಜನೇಯ ಸ್ವಾಮಿ ದೇವಾಲಯದ ಆವರಣ, ಪಟ್ಟಣದ ಪುರಸಭೆ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ಮೆರವಣಿಗೆ ಸಾಗುವ ಪ್ರಮುಖ ವೃತ್ತಗಳಲ್ಲಿ ಹನುಮ ಮಾಲಾಧಾರಿಗಳು ಕೇಸರಿ ಬಣ್ಣದ ಬಾವುಟಗಳನ್ನು ಕಟ್ಟಿ, ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದಾರೆ.