ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಮಂಡ್ಯ : ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸಂಸದೆ ಸುಮಲತಾ ಅವರಿಗೆ ಮಂಡ್ಯ ಲೋಕಸಭೆಯ ಮೈತ್ರಿಯ ಅಭ್ಯರ್ಥಿಯಾಗಿ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುವುದು ಖಚಿತ ಎಂದು ಸುಮಲತಾ ಅವರ ಆಪ್ತ ಹನಕೆರೆ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಲೋಕಸಭಾ ಚುನಾವಣೆ ಹತ್ತಿರವಾಗ್ತಿದೆ. ಇತ್ತೀಚೆಗೆ ಕೆಲ ಗೊಂದಲಗಳು ಸೃಷ್ಟಿಯಾಗಿದೆ. ಕಳೆದ 4 ವರ್ಷಗಳಲ್ಲಿ ಸಂಸದೆ ಸುಮಲತಾ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ಸುಮಲತಾ ಅವರು ಅಭ್ಯರ್ಥಿ ಆಗಿರುತ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸುಮಲತಾ ಶ್ರಮಿಸಿದ್ದಾರೆ ಎಂದರು.
ಪಾಂಡವಪುರ ಹಾಗೂ ಮೈಶುಗರ್ ಕಾರ್ಖಾನೆ ಪುನಾರಂಭ ಮಾಡಲು ಯಶಸ್ವಿಯಾಗಿದ್ದಾರೆ. KRS ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದಾರೆ. ಹೋರಾಟದ ಪ್ರತಿಫಲ ಹೈಕೋರ್ಟ್ KRS ಸುತ್ತ 20KM ಕಲ್ಲುಗಣಿಗಾರಿಕೆ ನಡೆಸದಂತೆ ಆದೇಶಿಸಿದೆ. ಎಲ್ಲ ಹೋರಾಟಗಳಲ್ಲೂ ಸುಮಲತಾ ಮುಂಚೂಣಿಯಲ್ಲಿದ್ದಾರೆ ಎಂದರು.
ಸುಮಲತಾ ಅವರ ಅಭಿವೃದ್ಧಿ ಸಾಧನೆ, ಅಂಬರೀಶ್ ಅವರ ಕೊಡುಗೆ ಜನರಿಗೆ ಹೇಳ್ತೇವೆ. ಅತಿ ಹೆಚ್ಚು ದಿಶಾ ಸಭೆ ನಡೆಸಿದ ಹೆಗ್ಗಳಿಕೆ ಸುಮಲತಾ ಅವರದ್ದು. ಸಂಸದ್ ನಿಧಿ ಬಳಸಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲ ಮಾನದಂಡ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. MLA ಚುನಾವಣೆಯಲ್ಲಿ ಬಿಜೆಪಿಗೆ ಸುಮಲತಾ ಅವರು ಬಾಹ್ಯ ಬೆಂಬಲ ಕೊಟ್ಟಿದ್ದರು. ಆದರೆ ಈಗ ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ. ಅದರಿಂದ ಕೆಲ ಉಹಾಪೋಹ ಹುಟ್ಟಿಕೊಂಡಿದೆ ಎಂದರು.
ಸುಮಲತಾರಿಗೆ ಟಿಕೆಟ್ ಇಲ್ಲ, ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡ್ತಾರೆ ಎಂದು ಚರ್ಚೆ ಆಗ್ತಿದೆ. ಮುಂಬರುವ MP ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಗಿರುತ್ತೇನೆ ಎಂದು ಸುಮಲತಾ ಹೇಳಿದ್ದಾರೆ. ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ವಿಶ್ವಾಸ ಇದೆ. ಸುಮಲತಾ ಅವರು ಈಗಲೂ ಪಕ್ಷೇತರ ಸಂಸದೆ. ಬಿಜೆಪಿಯ ಸದಸ್ಯತ್ವವನ್ನು ಅವರು ಇನ್ನು ಪಡೆದಿಲ್ಲ, ಬಾಹ್ಯ ಬೆಂಬಲ ನೀಡಿದ್ದಾರೆ. ಪಕ್ಷ ಯಾವುದಾದರೂ ಸುಮಲತಾ ಅವರು ಅಭ್ಯರ್ಥಿ ಆಗಿರಬೇಕು ಎಂದು ಹೇಳಿದರು.
ಪಕ್ಷ ಯಾವುದು ಎಂದು ಸುಮಲತಾ ತೀರ್ಮಾನ ಮಾಡ್ತಾರೆ. ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದ್ರು ನಮ್ಮ ಬೆಂಬಲ ಇರುತ್ತದೆ. ಬಿಜೆಪಿ ಮಂಡ್ಯವನ್ನ ಜೆಡಿಎಸ್‌ಗೆ ಬಿಟ್ಟು ಕೊಟ್ಟರೂ ಸುಮಲತಾ ಸ್ಪರ್ಧೆ ಖಚಿತ. ಆದರೆ ಬಿಜೆಪಿ ಮಂಡ್ಯ ಉಳಿಸಿಕೊಳ್ಳುವ ವಿಶ್ವಾಸ ಇದೆ. ಹಳೇ ಮೈಸೂರು ಭಾಗದಲ್ಲಿ ಬಲಿಷ್ಠ ಬಿಜೆಪಿ ಕಟ್ಟುವ ಆಸೆ ಇದ್ದರೆ, ಸುಮಲತಾ ಅವರ ಅವಶ್ಯಕತೆ ಇದ್ದರೆ ಮಂಡ್ಯ ಉಳಿಸಿಕೊಳ್ತಾರೆ. ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ರಾಜಕೀಯದಲ್ಲಿ ಬದಲಾವಣೆ ಗಾಳಿ ಯಾವಾಗ ಬೇಕಾದರೂ ಬೀಸಬಹುದು ಎಂದು ಹೇಳಿದರು.
ಏನೇ ಆದರೂ ಸುಮಲತಾ ಅವರು ಕಣದಲ್ಲಿರುತ್ತಾರೆ. ಸುಮಲತಾ ಬೆಂಗಳೂರಿಗೆ ಬಂದ ತಕ್ಷಣ ನಮ್ಮ ನಿಯೋಗ ತೆರಳಿ ಭೇಟಿ ಮಾಡ್ತೀವಿ. ಚರ್ಚೆ ನಡೆಸಿ, ಸುಮಲತಾ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಸಚ್ಚಿದಾನಂದ ಹೆಚ್ಡಿಕೆ ಭೇಟಿ ಸುಮಲತಾ ಅವರಿಗೆ ಸಂಬಂಧಿಸಿದ್ದಲ್ಲ. ಅವರ ಭೇಟಿ ಅವರ ವೈಯಕ್ತಿಕ. ಸಚ್ಚಿದಾನಂದ ಬಿಜೆಪಿ ಅಭ್ಯರ್ಥಿ ಆಗಿದ್ದವರು. ಸಚ್ಚಿದಾನಂದ ಅಂಬರೀಶ್ ಅವರ ಶಿಷ್ಯ. ಸುಮಲತಾ ನಿರ್ಧಾರಕ್ಕೆ ಸಚ್ಚಿದಾನಂದ ಬದ್ಧರಾಗಿರ್ತಾರೆ ಅನ್ನೋ ನಂಬಿಕೆ ಇದೆ. ಸುಮಲತಾ ಪಕ್ಷದ ಅಭ್ಯರ್ಥಿ ಆದರೂ, ಪಕ್ಷೇತರ ಸ್ಪರ್ಧಿಸಿದರೂ ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೆಆರ್ಎಸ್ ಡ್ಯಾಂ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೈಕೋರ್ಟ್ ಆದೇಶ ಸ್ವಾಗತಿಸಿದ ಸಂಸದೆ ಸುಮಲತಾ, ಹೋರಾಟಗಾರರು