ಜೈಂಟ್ ವ್ಹೀಲ್‌ಗೆ ಬಾಲಕಿಯ ತಲೆಕೂದಲು ಸಿಲುಕಿದ ಪ್ರಕರಣ ಮಂಡ್ಯ: ಜೈಂಟ್ ವ್ಹೀಲ್‌ನಲ್ಲಿ ಆಟವಾಡುತ್ತಿದ್ದಾಗ ಬೆಂಗಳೂರಿನ ಬಾಲಕಿ ಶ್ರೀವಿದ್ಯಾ (14) ಎನ್ನುವವರ ತಲೆಕೂದಲು ಸಿಲುಕಿ, ಚರ್ಮದ ಸಮೇತವಾಗಿ ಕಿತ್ತು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಲೀಕ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಜೈಂಟ್ ವ್ಹೀಲ್‌ನ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ), ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಡ್ಯದ ಶ್ರೀರಂಗಪಟ್ಟಣದ ಶ್ರೀ ರಂಗನಾಥ ದೇಗುಲದ ಮೈದಾನದಲ್ಲಿ ಶನಿವಾರ ರಾತ್ರಿ ಅವಘಡ ನಡೆದಿತ್ತು. ಇದೀಗ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಸಂಬಂಧಿ ಪೂಜಾ ನಿನ್ನೆ ಮಧ್ಯಾಹ್ನ ಸಲ್ಲಿಸಿದ ದೂರು ಆಧರಿಸಿ ಶ್ರೀ ರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಂಗನಾಥ ದೇಗುಲದಲ್ಲಿ ರಥಸಪ್ತಮಿ ಅಂಗವಾಗಿ ರಂಗನಾಥ ಜಾತ್ರೋತ್ಸವ ನಡೆಯುತ್ತಿತ್ತು. ಜಾತ್ರೋತ್ಸವ ಪ್ರಯುಕ್ತ ದೇಗುಲದ ಮೈದಾನದಲ್ಲಿ ರಮೇಶ್, ಜೈಂಟ್ ವ್ಹೀಲ್ ಹಾಕಿದ್ದರು. ಈತ ಜೈಂಟ್ ವ್ಹೀಲ್ ಅನ್ನು ಮೈದಾನದಲ್ಲಿ ಅಳವಡಿಸಲು ದೇಗುಲ ಅಥವಾ ಪುರಸಭೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಅನುಮತಿ ಇಲ್ಲದೇ ಜಾತ್ರೋತ್ಸವ ಮೈದಾನದಲ್ಲಿ ಮುಂಜಾಗ್ರತೆ ಕ್ರಮವನ್ನೂ ಕೈಗೊಳ್ಳದೆ ಜೈಂಟ್ ವ್ಹೀಲ್ ಅಳವಡಿಸಿರುವ ಮಾಲೀಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವ ಆರೋಪದಡಿ ದೇಗುಲದ ಸಿಇಒ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿರುದ್ಧವೂ ಐಪಿಸಿ ಸೆಕ್ಷನ್ 337ರ ಅಡಿಯಲ್ಲಿ ಕೇಸು ಹಾಕಲಾಗಿದೆ.
ಪೂಜಾ ಠಾಣೆಗೆ ನೀಡಿರುವ ದೂರಿನಲ್ಲಿ, ಗಾಯಾಳು ಬಾಲಕಿ ಶ್ರೀವಿದ್ಯಾ ತಮ್ಮ ಚಿಕ್ಕಮ್ಮನ ಮಗಳು. ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಹಾಗೂ ರಂಗನಾಥ ಜಾತ್ರೋತ್ಸವ ನಿಮಿತ್ತ ಬೆಂಗಳೂರಿನಿಂದ ತನ್ನ ತಾಯಿಯೊಂದಿಗೆ ನಮ್ಮ ಮನೆಗೆ ಬಂದಿದ್ದಳು. ಮನೆಯವರೆಲ್ಲ ಸೇರಿ ನಾವು ಜಾತ್ರೋತ್ಸವಕ್ಕೆ ಹೋಗಿದ್ದೆವು. ಅಲ್ಲಿ ಆಕೆ ಇನ್ನೊಬ್ಬ ಯುವತಿಯ ಜೊತೆಗೆ ಆಟವಾಡಲು ಎಲ್ಲರಂತೆ ಜೈಂಟ್ ವ್ಹೀಲ್ ಏರಿದ್ದಾಳೆ. ಜೈಂಟ್ ವ್ಹೀಲ್ ಆಡಿಸುತ್ತಿದ್ದ ಆಯೋಜಕರು ಹಾಗೂ ಕೆಲಸಗಾರರು ಯಾವುದೇ ಮುನ್ನೆಚ್ಚರಿಕೆ ಸೂಚನೆ ನೀಡದೆ ಆಟವಾಡಿಸುತ್ತಿದ್ದರು.
ಆಟವಾಡುತ್ತಿದ್ದಾಗ ಶ್ರೀವಿದ್ಯಾ ಕೂದಲು ತಾಂತ್ರಿಕ ದೋಷವಿದ್ದ ಜೈಂಟ್ ವ್ಹೀಲ್‌ನ ಕನೆಕ್ಟಿಂಗ್ ರಾಡ್ಗೆ ಸಿಲುಕಿತು. ಆ ಸಂದರ್ಭದಲ್ಲಿ ಆಕೆಯ ಕೂದಲು ಚರ್ಮಸಹಿತ ಕಿತ್ತುಬಂದು ಗಂಭೀರ ಗಾಯಗೊಂಡಿದ್ದಳು. ನೋವಿನಲ್ಲಿ ಕಿರುಚಿಕೊಂಡಿದ್ದಾಳೆ. ಆದರೆ ಆಯೋಜಕರು ಜೈಂಟ್ ವ್ಹೀಲ್ ನಿಲ್ಲಿಸದೆ ಮುಂದುವರಿಸಿದ್ದಾರೆ. ತಕ್ಷಣವೇ ಅಲ್ಲಿದ್ದ ನನ್ನ ದೊಡ್ಡಮ್ಮನ ಮಗ ತಕ್ಷಣ ಹೋಗಿ ಜನರೇಟರ್ ಆಫ್ ಮಾಡಿ ಸಿಕ್ಕಿಹಾಕಿಕೊಂಡಿದ್ದ ರಾಡ್ನಿಂದ ಚರ್ಮಸಹಿತ ಕೂದಲನ್ನು ಬಿಡಿಸಿ ಆಕೆಯನ್ನು ಸಾರ್ವಜನಿಕರ ಸಹಾಯದೊಂದಿಗೆ ಶ್ರೀ ರಂಗಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೆವು.
ಜೈಂಟ್ ವ್ಹೀಲ್ ಮಾಲೀಕ ರಮೇಶ್ ಅವರು ಸೂಕ್ತವಾದ ತಾಂತ್ರಿಕ ವ್ಯಕ್ತಿಗಳನ್ನು ಆಯೋಜಿಸದೇ ಹಾಗೂ ಅಲ್ಲಿನ ಕೆಲಸಗಾರರಿಗೆ ಸರಿಯಾದ ಸೂಚನೆಗಳನ್ನೂ ನೀಡದೇ ಇರುವುದೇ ಈ ಅವಘಡಕ್ಕೆ ಕಾರಣವಾಗಿದೆ. ಸರಿಯಾದ ತನಿಖೆ ನಡೆಸಿ, ಮಾಲೀಕ ಹಾಗೂ ಅನುಮತಿ ಹಾಗೂ ಮುನ್ನೆಚ್ಚರಿಕೆ ಕ್ರಮಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿರುವ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮಂಡ್ಯ: ಜಾಯಿಂಟ್ ವ್ಹೀಲ್‌ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ