ಮಂಡ್ಯ: ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದ. ಅಂದು ಟಿಪ್ಪು ಸುಲ್ತಾನ್ ಅಣೆಕಟ್ಟು ಕಟ್ಟಿಸಿದ್ದರೆ, ಇಂದು ಕರ್ನಾಟಕ ಹಾಗೂ ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಯೇ ಆಗುತ್ತಿರಲಿಲ್ಲ ಎಂದು ಸಾಹಿತಿ ಪ್ರೊ ಕೆ ಎಸ್ ಭಗವಾನ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟೆ ಕಟ್ಟಬೇಕು ಎಂದು ಮನಸ್ಸು ಮಾಡಿದ್ದ. ಆದರೆ, ಅಷ್ಟೊತ್ತಿಗೆ 4ನೇ ಆಂಗ್ಲೋ ಮೈಸೂರು ಯುದ್ಧ ನಡೆಯಿತು. ಇದರಿಂದಾಗಿ ಅಣೆಕಟ್ಟು ನಿರ್ಮಾಣ ಕಾರ್ಯ ನಿಂತು ಹೋಯಿತು. ಒಂದು ವೇಳೆ ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಿ ಮುಗಿಸಿದ್ದರೆ, ಕಾವೇರಿ ನೀರಿಗಾಗಿ ಇವತ್ತು ಗಲಾಟೆಯೇ ನಡೆಯುತ್ತಿರಲಿಲ್ಲ. ಯಾಕೆಂದರೆ, ಆಗ ತಮಿಳುನಾಡು ಪ್ರದೇಶವು ಸಂಪೂರ್ಣವಾಗಿ ಟಿಪ್ಪು ಸುಲ್ತಾನ್ ಆಡಳಿತದ ವಶದಲ್ಲಿತ್ತು. ಹೀಗಾಗಿ ಟಿಪ್ಪುಗೆ ಯಾರ ಅನುಮತಿ ಕೇಳುವ ಅಗತ್ಯವೇ ಇರಲಿಲ್ಲ. ಅಲ್ಲದೆ, ಡ್ಯಾಂ ನಿರ್ಮಿಸಿದ್ದರೆ, ಕರ್ನಾಟಕ ಹಾಗೂ ತಮಿಳುನಾಡಿನ ಜನರು ಬಹಳ ನೆಮ್ಮದಿಯಿಂದ ಇರುತ್ತಿದ್ದರು. ಆದರೆ, ಅಂತಹ ಅವಕಾಶ ನಮಗೆ ತಪ್ಪಿ ಹೋಯಿತು ಎಂದು ಪ್ರೊ. ಭಗವಾನ್ ಹೇಳಿದರು.
ರಾಮರಾಜ್ಯ ಎಂಬ ಮಾತು ಹೆಚ್ಚು ಹರಡಲು ಕಾರಣ ಮಹಾತ್ಮ ಗಾಂಧಿ: ಇದೇ ವೇಳೆ, ರಾಮನ ಕುರಿತು ಮತ್ತೆ ಮಾತು ಮುಂದುವರೆಸಿದ ಪ್ರೊ ಕೆ ಎಸ್ ಭಗವಾನ್, ದೇಶದಲ್ಲಿ ರಾಮರಾಜ್ಯ ಎಂಬ ಪದವನ್ನು ಕಥೆ ಕಟ್ಟಿ ಬಿಡಲಾಗಿದೆ. ರಾಮರಾಜ್ಯ ಎಂಬ ಮಾತು ಹೆಚ್ಚಾಗಿ ಹರಡಲು ಕಾರಣರಾದವರು ಮಹಾತ್ಮ ಗಾಂಧಿ ಎಂದೆನಿಸುತ್ತದೆ. ಆದರೆ, ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದರೆ ರಾಮರಾಜ್ಯ ಎಂಬ ಮಾತಿಗೆ ಯಾವುದೇ ಆಧಾರವಿಲ್ಲ ಎಂದರು.